

ಕುಂದಾಪುರ: ಕೊಲ್ಲೂರು ಸೌರ್ಪಣಿಕಾ ನದಿ ಪಾಲಾಗಿದ್ದ ಬೆಂಗಳೂರು ಮೂಲದ ಮಹಿಳೆ ವಸುಧಾ ಚಕ್ರವರ್ತಿ ಪತ್ತೆಗಾಗಿ 72 ಗಂಟೆಗಳ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ ತಂಡ ಹಾಗೂ ದುರ್ಗಮ ಕಾಡು ಹಾದಿಯಲ್ಲಿ ಮೃತದೇಹವನ್ನು ಕೊಲ್ಲೂರಿಗೆ ತರಲು ಸಹಕರಿಸಿದ ಸ್ಥಳೀಯರಿಗೆ ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಸಚಿನ್ ಜಿ., ರವಿ ಮಂಜುನಾಥ್ ಗೌಡ, ಮುಳುಗು ತಜ್ಞ ಈಶ್ವರ್ ಮಲ್ಪೆ, ಹರೀಶ್ ಪೂಜಾರಿ, ಗಂಗೊಳ್ಳಿ ಆಪತ್ಬಾಂಧವ 24*7 ಇಬ್ರಾಹಿಂ ಗಂಗೊಳ್ಳಿ, ಸ್ಥಳೀಯರಾದ ಪ್ರದೀಪ್ ಭಟ್ ಸಂಪ್ರೆ, ನಾಗರಾಜ್ ನಾಯ್ಕ ಬಾವಡಿ, ಉಮೇಶ್ ಭಟ್ ಗೊಳಿಗುಡ್ಡೆ ಹಾಗೂ ಅವರೊಂದಿಗೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಕೊಲ್ಲೂರು ಠಾಣಾಧಿಕಾರಿ ವಿನಯ್ ಎಂ.ಕೊರ್ಲಹಳ್ಳಿ ಸಹಿತ ಇತರ ಸಿಬ್ಬಂದಿ ಹಾಗೂ ನಾಗರಿಕರನ್ನು ಡಿವೈಎಸ್ಪಿ ಗೌರವಿಸಿ ಅಭಿನಂದಿಸಿದರು.
ಬೈಂದೂರು ವೃತ್ತ ನಿರೀಕ್ಷಕ ನಿಲೇಶ್ ಚೌಹಾಣ್, ಕುಂದಾಪುರ ಗ್ರಾಮಾಂತರ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ ಮೊದಲಾದವರಿದ್ದರು.