

ಮಂಡ್ಯ: ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದಿದ್ದೇವೆ ಎನ್ನುವ ಖಿನ್ನತೆಯಿಂದ ಹೊರಬರಬೇಕು. ಏಕೆಂದರೆ ಪರೀಕ್ಷೆ ಎನ್ನುವುದು ಕೇವಲ ಒಂದು ದಿನದಲ್ಲಿ ಮುಗಿಯುವ ಪ್ರಕ್ರಿಯೆ ಅಲ್ಲ. ಹಾಗಾಗಿ ಬೇರೆ ವಿಷಯಗಳಲ್ಲಿಯೂ ಸಾಧನೆ ಮಾಡಬಹುದು ಎಂಬುವ ನಿಟ್ಟಿನಲ್ಲಿ ಅಧ್ಯಯನ ಸಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.
ನಗರದ ಕಾಳೇಗೌಡ ಶಾಲಾ ಆವರಣದಲ್ಲಿ ಬದುಕು ಬೆಳಕು ಸೇವಾ ಸಮಿತಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ, ನಿವೃತ್ತ ಶಿಕ್ಷಕ ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ, ಸಂತೋಷ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಓದು ಎನ್ನುವುದು ನಿರಂತರವಾಗಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಯಶಸ್ವಿನ ಕಡೆ ಸದಾ ಗಮನ ಹರಿಸುತ್ತಿರಬೇಕು ಎಂದು ತಿಳಿಸಿದರು.
ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಎಂ.ಲೋಕೇಶ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ಪ್ರಗತಿ ಕಾಣಲು ಶಿಕ್ಷಕ, ಉಪನ್ಯಾಸಕರ ಬೋಧನಾ ಶೈಲಿ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಕೌಶಲದಿಂದ ಕೂಡಿರಬೇಕು. ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆ ಬಂತು, ನಾವು ಅಂದುಕೊಂಡಷ್ಟು ಬರಲಿಲ್ಲವೆಂದು ವಿದ್ಯಾರ್ಥಿಗಳು ಧೃತಿಗೆಡುವುದು ಬೇಡ ಎಂದರು.
ವಿವಿಧ ಸಂಘಟನೆಯ ಅರವಿಂದ್, ವಿನಯ್‌ಕುಮಾರ್, ಸಂತೋಷ್, ಚಂದ್ರಪ್ರಭ, ಗೋವಿಂದರಾಜ್ ಇದ್ದರು.