‘ಮೊಬೈಲ್ ಕ್ಲಿನಿಕ್’ ವೈದ್ಯ-ಸಿಬ್ಬಂದಿಗೆ ಅಭಿನಂದನೆ

16
Published on

ಮೈಸೂರು: ‘ಮೊಬೈಲ್ ಕ್ಲಿನಿಕ್’ನಲ್ಲಿ ಸೇವೆ ಸಲ್ಲಿಸಿದ ವೈದ್ಯರು, ದಾದಿಯರು, ಟೆಕ್ನಿಷಿಯನ್ ಮತ್ತು ಇತರ ಸಿಬ್ಬಂದಿಗೆ ಗುರುವಾರ ಪಾಲಿಕೆ ವತಿಯಿಂದ ‘ಕರೊನಾ ವಾರಿಯರ್ಸ್‌’ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ನಗರದಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಬಂದ್ ಆಗಿದ್ದಾಗ ಜನರು ವಿವಿಧ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಪರದಾಡುವಂತಾಗಿತ್ತು. ಇದನ್ನು ಮನಗಂಡು ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೆಎಸ್‌ಎಸ್ ಆಸ್ಪತ್ರೆಯಿಂದ 3, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಿಂದ 5, ಕಾಮಾಕ್ಷಿ ಆಸ್ಪತ್ರೆ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆ, ನಾರಾಯಣ ಹೃದಯಾಲಯದಿಂದ ತಲಾ ಒಂದು ಆಂಬುಲೆನ್ಸ್ ನೀಡಲಾಯಿತು.

ಉಚಿತವಾಗಿ ಔಷಧ ನೀಡಲು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ನೆರವು ನೀಡಿತ್ತು. ಇದರಿಂದ 12 ಮೊಬೈಲ್ ಕ್ಲಿನಿಕ್‌ಗಳು ಮೈಸೂರು ನಗರ ಮಾತ್ರವಲ್ಲದೆ, ರಿಂಗ್‌ರಸ್ತೆ ಸುತ್ತಲಿನ ಗ್ರಾಮ, ಬಡಾವಣೆಗಳು ಸೇರಿದಂತೆ 148 ಸ್ಥಳಗಳಲ್ಲಿ ಆರೋಗ್ಯ ಸೇವೆ ನೀಡಿವೆ ಎಂದರು.

20 ದಿನದಲ್ಲಿ ಎಲ್ಲ ಮೊಬೈಲ್ ಕ್ಲಿನಿಕ್‌ನಿಂದ ಒಟ್ಟು 15,276 ಜನರು ಆರೋಗ್ಯ ಸೇವೆ ಪಡೆದು ವಿವಿಧ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಮೊಬೈಲ್ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ವಾಹನ ಚಾಲಕರು ಹಾಗೂ ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಜಿಲ್ಲಾಡಳಿತ, ಪಾಲಿಕೆ ಸಿಬ್ಬಂದಿ, ಆರೋಗ್ಯ ಇಲಾಖೆ, ಭಾರತೀಯ ಜೈನ್ ಸಂಘಟನೆ, ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಸೇರಿ ಎಲ್ಲ ಸ್ವಯಂ ಸೇವಕರಿಗೂ ಪಾಲಿಕೆ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.

ಮೇಯರ್ ತಸ್ನಿಂ, ಉಪಮೇಯರ್ ಶ್ರೀಧರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ಯು.ಸುಬ್ಬಯ್ಯ, ಆರೋಗ್ಯಾಧಿಕಾರಿಗಳಾದ ಡಾ.ಡಿ.ಜಿ.ನಾಗರಾಜು, ಡಾ.ಜಯಂತ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net