

ಮೈಸೂರು: ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪುರಸ್ಕಾರವನ್ನು ಮೂವರು ಮಾನ್ಯರಿಗೆ ನೀಡಿರುವುದು ಸಂತೋಷದ ಸಂಗತಿ. ಮೂವರಿಗೆ ಭಾರತರತ್ನ ಭೂಷಣಪ್ರಾಯವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿನಂದಿಸಿದ್ದಾರೆ.
ಪಿ.ವಿ. ನರಸಿಂಹರಾವ್ ಭಾರತವನ್ನು ಹೊಸ ಆರ್ಥಿಕತೆಯ ಯುಗಕ್ಕೆ ಕೊಂಡೊಯ್ದ ಧೀಮಂತ. ಸುಮಾರು 14 ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದರು. ಡಾ.ಮನಮೋಹನ ಸಿಂಗ್‌ರಂಥ ಆರ್ಥಿಕ ತಜ್ಞರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂಥ ದೂರದೃಷ್ಟಿ ಉಳ್ಳವರಾಗಿದ್ದವರು.
ಚೌಧರಿ ಚರಣ್‌ಸಿಂಗ್ ಕೃಷಿ ಸಮುದಾಯದ ಜನತೆಯನ್ನು ಒಟ್ಟುಗೂಡಿಸಿ ಒಂದು ಹೊಸ ರಾಜಕೀಯ ಸಮೀಕರಣವನ್ನು ಸಾಧಿಸಿದ್ದರು. ಅನಂತರ ಕೆಲವು ಕಾಲ ಭಾರತದ ಪ್ರಧಾನಮಂತ್ರಿಗಳೂ ಆಗಿ ನವಮನ್ವಂತರಕ್ಕೆ ನಾಂದಿ ಹಾಡಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಎಂ.ಎಸ್. ಸ್ವಾಮಿನಾಥನ್ ಆಧುನಿಕ ಭಾರತದ ಹಸಿರು ಕ್ರಾಂತಿಯ ಹರಿಕಾರರೆಂದೇ ಖ್ಯಾತರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕೃಷಿವಿಜ್ಞಾನಿಗಳಾಗಿದ್ದ ಅವರ ಸಂಶೋಧನೆಗಳ ಫಲವಾಗಿ ಇಂದು ಭಾರತ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಂತಾಗಿದೆ.
ಅವರು ಕೊನೆಯ ದಿನಗಳಲ್ಲಿ ಸಮಾರಂಭವೊಂದರಲ್ಲಿ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ದೇಶಗಳಿಗೆ ಉತ್ತಮ ಭವಿಷ್ಯವಿದೆಯೇ ಹೊರತು ಬಂದೂಕುಗಳನ್ನು ತಯಾರಿಸುವ ದೇಶಗಳಿಗಲ್ಲ. ನಮ್ಮ ಯುವಕರು ಶ್ರಮದಾಯಕವೆಂದು, ಲಾಭದಾಯಕವಲ್ಲವೆಂದು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ತೋರುತ್ತಿಲ್ಲ. ಬಂದೂಕುಗಳನ್ನು ಕೊಳ್ಳಬಹುದು. ಆದರೆ ಆಹಾರಧಾನ್ಯಗಳನ್ನು ಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದ ಈ ಮಾತುಗಳು ಇಡೀ ಜಗತ್ತೇ ಗಮನಿಸಬೇಕಾದುದಾಗಿದೆ ಎಂದಿದ್ದಾರೆ.
ಡಾ. ಸ್ವಾಮಿನಾಥನ್ ಸುತ್ತೂರು ಮಠಕ್ಕೆ ಹಾಗೂ ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರಕ್ಕೆ ಭೇಟಿ ನೀಡಿದ್ದು ಇನ್ನೂ ಹಸಿರಾಗಿಯೇ ಇದೆ ಎಂದು ಶ್ರೀಗಳು ಸ್ಮರಿಸಿದ್ದಾರೆ.
ಈ ಮೂವರು ಸಾಧಕರಿಗೆ ಅವರ ಅಭೂತಪೂರ್ವ ಸಾಧನೆಗಳಿಗಾಗಿ ಭಾರತ ರತ್ನ ಪುರಸ್ಕಾರ ನೀಡಿರುವುದು ದೇಶದ ಕೃತಜ್ಞತೆಯ ಸಂಕೇತವಾಗಿದೆ. ನಿಜವಾದ ಸಾಧಕರಿಗೆ ಗೌರವ ತಲುಪಿರುವುದು ಅಭಿಮಾನದ ಸಂಗತಿ ಎಂದು ಶ್ರೀಗಳು ಹೇಳಿದ್ದಾರೆ.