ಶಾಶ್ವತ ನೆಲೆ ಕಲ್ಪಿಸಲು ವಿಶೇಷ ಯೋಜನೆ: ಶಾಸಕ ರವಿಕುಮಾರ್ ಗಣಿಗ ಭರವಸೆ

Congratulations to the achievers Mandya
Published on

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹಿಂದುಳಿದಿರುವ ಮತ್ತು ಬಡತದಲ್ಲಿರುವ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಕಲ್ಪಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಸಕ ರವಿಕುಮಾರ್ ಜನ್ಮದಿನೋತ್ಸವ ಆಚರಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸವಿತಾ, ಮಡಿವಾಳ, ಕುಂಬಾರ ಸೇರಿದಂತೆ ಹತ್ತಾರು ಹಿಂದುಳಿದ ವರ್ಗಗಳಲ್ಲಿ ವಸತಿ ರಹಿತರಿದ್ದಾರೆ. ಅದೇ ರೀತಿ ಒಕ್ಕಲಿಗ, ಲಿಂಗಾಯಿತ, ಪರಿಶಿಷ್ಟ, ಅಲ್ಪಸಂಖ್ಯಾತ ವಿಭಾಗದಲ್ಲಿಯೂ ಕೂಡ ಸೂರಿಲ್ಲದ ಕುಟುಂಬಗಳಿವೆ. ಅವರೆಲ್ಲರಿಗೂ ಶಾಶ್ವತವಾದ ನೆಲೆ ಕಲ್ಪಿಸಲು ಮಹತ್ವದ ವಸತಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಹಿಂದುಳಿದ ಸಣ್ಣ ಸಣ್ಣ ಸಮುದಾಯಗಳು ಅಭಿವೃದ್ಧಿಯಾಗಬೇಕೆಂಬುದು ಡಿ.ದೇವರಾಜು ಅರಸು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತತ್ವವಾಗಿದೆ. ಆ ತತ್ವ ಪಾಲನೆಯ ನಿಟ್ಟಿನಲ್ಲಿ ಸಣ್ಣ ಸಮುದಾಯ ಮೇಲೆ ಬರಬೇಕು ಎಂಬುದು ತಮ್ಮ ಉದ್ದೇಶವಾಗಿದೆ. ಸವಿತಾ ಸಮಾಜವು ಸೇರಿದಂತೆ ಆರು ಸಣ್ಣ ಸಮುದಾಯಗಳಿಗೆ ಸಮುದಾಯ ಭವನ ಮತ್ತು ನಿವೇಶನ ಇಲ್ಲ. ಸವಿತಾ ಸಮಾಜದ ನಿವೇಶನಕ್ಕೆ 10 ಲಕ್ಷ ರೂ ನನ್ನ ಸ್ವಂತ ಹಣವನ್ನು ನೀಡುತ್ತೇನೆ. ಉಳಿದ ಹಣವನ್ನು ನೀವು ಹೊಂದಿಸಿಕೊಂಡರೆ ಮುಡಾದಿಂದ ನಿವೇಶನವನ್ನು ನನ್ನ ಕಾಲದಲ್ಲಿ ಕೊಡಿಸುತ್ತೇನೆ ಎಂದರು.

ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮುಡಾ ಅಧ್ಯಕ್ಷ ನಯೀಂ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಪ್ರಾಧ್ಯಾಪಕಿ ಕೆಂಪಮ್ಮ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಸವಿತಾ ಸಮಾಜದ ಮುಖಂಡರಾದ ಆಂಜನಪ್ಪ, ರಾಜಣ್ಣ, ವೈರಮುಡಿ, ಪ್ರತಾಪ್, ಸೋಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net