

ಚನ್ನರಾಯಪಟ್ಟಣ : ಭಾರತೀಯ ನಾಗರಿಕ ಸೇವೆಯ ಪರೀಕ್ಷೆಯಲ್ಲಿ 459ನೇ ರ‌್ಯಾಂಕ್ ಪಡೆದು ಆಡಳಿತ ಸೇವೆಗೆ ಆಯ್ಕೆಯಾಗಿರುವ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಪಿಯು ಕಾಲೇಜಿನ ಹಳೇಯ ವಿದ್ಯಾರ್ಥಿ ಎನ್.ಎಂ.ಶಶಾಂಕ್ ಅವರನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿತು.
ತಾಲೂಕಿನ ಕಸಬಾ ಹೋಬಳಿ ನಲ್ಲೂರು ಗ್ರಾಮದ ಚಂದ್ರಮ್ಮ ಮತ್ತು ಪಟೇಲ್ ಮಂಜುನಾಥ್ ಅವರ ಪುತ್ರ ಶಶಾಂಕ್ ಪಟ್ಟಣದ ಕೋಟೆಯಲ್ಲಿರುವ ಕ್ರೈಸ್ಟ್ ದಿ ಕಿಂಗ್ ಪಿಯು ಕಾಲೇಜಿನಲ್ಲಿ 2015ರಿಂದ 2017ರ ವರೆಗೆ ಪಿಯು ವ್ಯಾಸಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಆಹ್ವಾನಿಸಿದ ಕಾಲೇಜು ಆಡಳಿತ ಮಂಡಳಿ ಶುಕ್ರವಾರ ಹೃದಯಪೂರ್ವಕವಾಗಿ ಅಭಿನಂದಿಸಿತು.
ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಆಗಮಿಸಿದ ಎನ್.ಎಂ.ಶಶಾಂತ್ ಮತ್ತವರ ಪಾಲಕರನ್ನು ಸಂಸ್ಥೆ ಸಿಬ್ಬಂದಿ ಆರತಿ ಎತ್ತಿ, ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು. ತದನಂತರ ಶಶಾಂತ್ ಅವರಿಗೆ ಮೈಸೂರು ಪೇಟ ತೊಡಿಸಿ, ನಾಲ್ಕು ಮುಖಗಳುಳ್ಳ ಸಿಂಹದ ರಾಷ್ಟ್ರ ಲಾಂಛನ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿ, 2021ರಲ್ಲಿ ಬಿಎಸ್ಸಿ ಮುಗಿಸಿ ಬೆಂಗಳೂರಿಗೆ ತೆರಳಿ ನಾಗರಿಕ ಸೇವೆಯ ಕನಸು ಕಂಡು ಯಶ್ವಸಿಯಾದವನು ನಾನು. ದ್ವಿತೀಯ ಪಿಯುಸಿ ಅಂಕಪಟ್ಟಿ ಪಡೆಯಲು ಬಂದ ನನಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ರಾಧಾ ಮೇಡಂ ಅವರು, ಖಾಸಗಿ ವಾಹನಗಳಲ್ಲಿ ತಿರುಗುವುದು ಸಾಮಾನ್ಯ, ಸರ್ಕಾರಿ ವಾಹನದಲ್ಲಿ ಓಡಾಡುವಂತೆ ಜೀವನ ರೂಪಿಸಿಕೊಳ್ಳುವುದು ಕಷ್ಟ, ನಿನಗೆ ಆ ಸಾಮರ್ಥ್ಯ ಇದೆ, ಸಿವಿಲ್ ಸರ್ವಿಸ್ ಮಾಡು ಎಂದು ಅವರು ಹೇಳಿದ ಒಂದು ಮಾತು ನನ್ನನ್ನು ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿತು. ಕೃಷಿಕನಾಗುವ ಆಸೆ ಇದ್ದು, ಅವರ ಮಾತಿನಿಂದ ಬಿಎಸ್ಸಿ ಮಾಡಿ ನಾಗರಿಕ ಸೇವೆಗೆ ಮುಂದಾದೆ. ಯುಪಿಎಸ್ಸಿಯಲ್ಲಿ ತುಂಬ ಸ್ಪರ್ಧೆ ಇದ್ದು, ಯಾರನ್ನೂ ಸ್ಪೂರ್ತಿಯಾಗಿ ತೆಗೆದುಕೊಂಡು ಬರಬೇಡಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದು, ಮಾಡುವ ಛಲವಿದ್ದವರು ಮಾತ್ರ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಅಂಟೋನಿರಾಜ್ ಮಾತನಾಡಿ, ಹುಟ್ಟಿನಿಂದಲೇ ಖ್ಯಾತಿ ಬಂದರೆ ಅದು ಅಪಘಾತ, ಸಾಧನೆಯಿಂದ ಬಂದ್ರೆ ಅದು ಇತಿಹಾಸ ಎಂಬ ಅಬ್ದುಲ್ ಕಲಾಂ ಅವರ ಮಾತಿಗೆ ಪೂರಕವಾಗಿ ಖ್ಯಾತಿ ಗಳಿಸಿದವರು ಶಶಾಂತ್. ಅವರ ಇಂದಿನ ಸಾಧನೆ ನೋಡಿದರೆ ಆತನಿಗೆ ಶಿಕ್ಷಣ ನೀಡಿದ ನಮಗೆ ಹೆಮ್ಮೆಯಾಗುತ್ತದೆ. ಇವರು ನಿಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಈಗ ಮೊದಲ ಹೆಜ್ಚೆಯನ್ನೇ ಉತ್ತಮವಾಗಿ ಇಟ್ಟಿದ್ದಾರೆ. ಇದು ಇಲ್ಲಿಗೆ ನಿಲ್ಲಬಾರದು, ಅವರು ಮತ್ತಷ್ಟು ಉತ್ತಮ ರ‌್ಯಾಂಕ್‌ಗಳಿಸಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿ ದೊಡ್ಡ ಹೆಜ್ಚೆ ಗುರುತನ್ನು ತೋರಿಸುವಂತಾಗಬೇಕು. ಇಂತಹ ಮಕ್ಕಳು ಮಾಡಿದ ಸಾಧನೆಯಿಂದ ಹೆತ್ತವರಿಗೆ ಸಾಕಷ್ಟು ಸಂತೋಷ ಆಗುತ್ತದೆ. ಅವರ ಕಣ್ಣಿನಲ್ಲಿ ಕಾಣುವ ಆ ಆನಂದ ಎಲ್ಲ ಮಕ್ಕಳ ಪಾಲಕರಲ್ಲಿ ಕಾಣಬೇಕು, ಅದು ನೀವು ಪಡುವ ಶ್ರಮದಿಂದ ಸಾಧ್ಯವೆಂದರು.
ಎನ್.ಎಂ.ಶಶಾಂತ್‌ನ ಪಾಲಕರಾದ ಪಟೇಲ್ ಮಂಜುನಾಥ್, ಚಂದ್ರಮ್ಮ, ಕಾಲೇಜಿನ ಉಪ ಪ್ರಾಂಶುಪಾಲರಾದ ರಾಧಾ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.