

ಶಿವಮೊಗ್ಗ: ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸಂಸತ್‌ನಲ್ಲಿ ಮಾತನಾಡುವಾಗ ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವೆಂಬುದು ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ಹೇಳಿದ್ದರು. ಅಂತಹ ಮಾತುಗಳಿಗೆ ಹಿರಿಯ ವಕೀಲ ಜಿ.ಎಸ್.ನಾಗರಾಜ ಅದ್ಭುತ ಉದಾಹರಣೆ ಆಗಿದ್ದಾರೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬಣ್ಣಿಸಿದರು.
ನಗರದ ಎನ್‌ಇಎಸ್ ರಾಷ್ಟ್ರೀಯ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಜಿಎಸ್‌ಎನ್ ಕಿರಿಯ ವಕೀಲರ ಬಳಗ, ಜಿಲ್ಲಾ ವಕೀಲರ ಸಂಘದಿಂದ ಏರ್ಪಡಿಸಿದ್ದ ಜಿ.ಎಸ್.ನಾಗರಾಜ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಗಾಗಿ ಬದುಕುವ ಕೆಲವರ ನಡುವೆ ಸಮಾಜದ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಕ್ಕೆ ಕೆಲವೇ ಜನರು ಬದುಕುತ್ತಾರೆ. ಅಂತಹ ಕೆಲವರಲ್ಲಿ ಜಿಎಸ್‌ಎನ್ ಒಬ್ಬರು ಎಂದರು.
ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ಪ್ರೇರಣೆಯಿಂದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾಗೆ ಧುಮುಕಿದ ಜಿಎಸ್‌ಎನ್, ಸಾಮಾಜಿಕ ನ್ಯಾಯ ನೀಡಲು ಪಟ್ಟ ಶ್ರಮ ಮತ್ತು ಅದರಿಂದ ಪಡೆದ ಅನುಭವ ಅದೊಂದು ದೊಡ್ಡ ಆಸ್ತಿಯಾಗಿದೆ. ಅವರ ಐವತ್ತು ವರ್ಷದ ವೃತ್ತಿ ಜೀವನ ಸಾರ್ಥಕತೆ ಬಹಳ ದೊಡ್ಡ ಪಯಣವಾಗಿದೆ. ಸಮಾಜದ ವ್ಯವಸ್ಥೆ ಯಾವ ಗತಿಯಲ್ಲಿದೆ ಎಂದು ವಿಚಾರ ಮಾಡುವ ಶಕ್ತಿ ವಕೀಲರಿಗಿದೆ. ಈ ಮೂಲಕ ಕಕ್ಷಿದಾರರಿಗೆ, ಕೃಷಿ ಕಾರ್ಮಿಕರಿಗೆ ದೊಡ್ಡ ಆಸ್ತಿಯನ್ನು ನೀಡಿದ್ದು ಇಂತಹ ಸಾರ್ಥಕತೆಯ ಕಾರ್ಯಕ್ರಮಗಳು ಯುವ ವಕೀಲರಿಗೆ, ಹೋರಾಟಗಾರರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಮಾಜಿ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ, ಪ್ರೀತಿ, ನಿಷ್ಠೆ ಎಂಬುದು ಜಿಎಸ್‌ಎನ್ ಅವರನ್ನು ಆಕರ್ಷಿಸಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಅಸಂಖ್ಯಾತ ಜನರಿದ್ದು, ಸಮಾಜದ ಕೆಳಸ್ತರದ ಜನರ ಪರವಾಗಿ ನಾಗರಾಜ್ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ ಅವರದ್ದಾಗಿದೆ. ಸಂವಿಧಾನದಲ್ಲಿರುವ ಆಸೆ, ಮೌಲ್ಯ, ನಿರ್ದೇಶನದ ಹೊರತಾಗಿಲ್ಲ. ಅದಕ್ಕೆ ಪೂರಕವಾಗಿಯೇ ಎಲ್ಲವನ್ನೂ ಮಾಡಿಕೊಂಡು ಬಂದಿದ್ದಾರೆ. ಅದರ ಆಶಯಕ್ಕನುಗುಣವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ವಕೀಲ ಕೆ.ಬಸಪ್ಪ ಗೌಡ ಮಾತನಾಡಿದರು. ಇದೇ ವೇಳೆ ಕಿರಿಯ ಬಳಗದ ಸದಸ್ಯರು, ನಾಗರಿಕರು, ಆಪ್ತರು ಹಿರಿಯ ವಕೀಲ ಜಿ.ಎಸ್.ನಾಗರಾಜ್ ಅವರನ್ನು ಅಭಿನಂದಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್, ಹಿರಿಯ ವಕೀಲರಾದ ಎನ್.ದೇವೇಂದ್ರಪ್ಪ, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಉಪಸ್ಥಿತರಿದ್ದರು.