

ಮಂಡ್ಯ: ಸಾಧನೆ ಮತ್ತು ಸಮಾಜಸೇವೆಗೆ ಅಂಗವೈಕಲ್ಯತೆ ಮುಖ್ಯವಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ನೆಹರುನಗರದಲ್ಲಿರುವ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಧೈರ್ಯ ಮತ್ತು ಆತ್ಮಸ್ಥೈರ್ಯ ಮುಖ್ಯ. ನಮ್ಮ ಸಾಧನೆಗೆ ನಿಮ್ಮೆಲ್ಲರ ಕೀರ್ತಿ ಮತ್ತು ಧೈರ್ಯವೇ ಕಾರಣ ಎಂದು ನುಡಿದರು.
ನಾನು ಹೆಚ್ಚು ಓದಲಿಕ್ಕೆ ಆಗದಿದ್ದರೂ ಕೂಡ ನನ್ನಿಂದಾಗುವಷ್ಟು ವ್ಯಾಸಂಗ ಮಾಡಿದ್ದೇನೆ. ಈ ಗೌರವ ಪ್ರಶಸ್ತಿಗೆ ಭಾಜನರಾಗಲು ನಿಮ್ಮೆಲ್ಲರ ಕೀರ್ತಿ ಮತ್ತು ಹಿರಿಯ ಆಶೀರ್ವಾದ, ಸ್ಪೂರ್ತಿ ಕಾರಣ. ಪ್ರಸ್ತುತ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಿವೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಿ. ಓದಿನೊಂದಿಗೆ ಸಾಧನೆಯ ಹಂಬಲ ನಿಮ್ಮಲ್ಲಿರಲಿ. ಗುರು ಮತ್ತು ಪಾಲಕರ ಮಾತುಗಳನ್ನು ಕೇಳಿ ಗುರಿ ಇರಿಸಿಕೊಂಡು ಸಾಧಕರಾಗಿ ಎಂದು ಸಲಹೆ ನೀಡಿದರು.
ಡ್ಯಾಫೋಡಿಲ್ಸ್ ಶಾಲೆಯ ಕಾರ್ಯದರ್ಶಿ ಸುಜಾತಾ ಕೃಷ್ಣ ಮಾತನಾಡಿ, ಜಿಲ್ಲೆಯ ಹೆಮ್ಮೆಯ ಸುಪುತ್ರ ಪದ್ಮಶ್ರೀ ಗೌರವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಂಗವಿಕಲರ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೂ ಗೊತ್ತಾಗಲಿ. ನಮ್ಮ ಶಾಲೆಗೆ ತಾವು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಭಾಷಣ ನೀಡಿ ಎಂದು ಕೇಳಿದ್ದೇವು. ಇಂದು ಕಾಲಾವಕಾಶ ಕೂಡಿಬಂದಿದೆ ಎಂದರು.
ಸಾಹಿತಿ ಡಾ.ಪ್ರದೀಪಕುಮಾರ್‌ಹೆಬ್ರಿ, ಡ್ಯಾಫೋಡಿಲ್ಸ್ ಶಾಲೆ ಟ್ರಸ್ಟಿ ಮದನ್‌ಲಾಲ್, ಮುಖ್ಯಶಿಕ್ಷಕಿ ನಯನಾ ಇತರರಿದ್ದರು.