ಮಡಿಕೇರಿ ನಗರ ಪೌರಕಾರ್ಮಿಕರಿಗೆ ಅಭಿನಂದನೆ

dc
Published on

ಮಡಿಕೇರಿ: ಮಡಿಕೇರಿ ದಸರಾ ಯಶಸ್ಸಿಗೆ ಸಹಕರಿಸಿದ ಹಾಗೂ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಪೌರ ಕಾರ್ಮಿಕರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ, ಮಡಿಕೇರಿ ದಸರಾ ಯಶಸ್ಸಿಗೆ ಪೌರ ಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ. ಮಡಿಕೇರಿ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿನ್ನೆಲೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪೌರಕಾರ್ಮಿಕರು ಪರಿಸರ ಶುಚಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯೂ ಪರಿಸರ ಶುಚಿತ್ವಕ್ಕೆ ಒತ್ತು ನೀಡಿರುವುದು ಮೆಚ್ಚುವಂತದ್ದು, ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.


ಕೊಡಗು ಜಿಲ್ಲೆ ಸ್ವಚ್ಛತೆಯಲ್ಲಿ ಇಡೀ ವಿಶ್ವದಲ್ಲಿಯೇ ಮಾದರಿಯಾಗಬೇಕು ಎಂಬುದು ಪ್ರತಿಯೊಬ್ಬರ ಆಶಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.


ಮಡಿಕೇರಿ ನಗರ ಸ್ವಚ್ಛತೆಯಲ್ಲಿ ಈಗಾಗಲೇ ೧೦ನೇ ಸ್ಥಾನದಲ್ಲಿದ್ದು, ಮತ್ತಷ್ಟು ಶುಚಿತ್ವಕ್ಕೆ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಮಡಿಕೇರಿ ನಗರ ದಸರಾ ಸಮಿತಿ ಗೌರವ ಅಧ್ಯಕ್ಷ ಜಿ.ಚಿದ್ವಿಲಾಸ್, ಪೌರಾಯುಕ್ತ ಎಚ್.ಆರ್.ರಮೇಶ್, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್.ಎಚ್.ಟಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net