ಕರಾವಳಿ ಭಾಗದ ಜನಸಾಮಾನ್ಯರ ಹಕ್ಕುಗಳ ಧ್ವನಿ

UDP-7-10-KraisthaSanmana
ಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಪ. ಸದಸ್ಯ ಐವಾನ್ ಡಿಸೋಜಾ ಅವರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸಲಾಯಿತು. ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ವಂ.ಐವಾನ್ ಡಿಸೋನ್ಸ್, ಪಾಸ್ಟರ್ ಸೆಲ್ವಕುಮಾರ್, ವಂ.ಎಂಟನಿ ಡಿಸಿಲ್ವಾ, ವಿನಯಕುಮಾರ್ ಸೊರಕೆ, ಗ್ರೇಸಿ ಕುವೆಲ್ಲೊ, ವೆರೋನಿಕಾ ಕರ್ನೆಲಿಯೋ ಇತರರಿದ್ದರು.
Published on

ಡಾ.ಜೆರಾಲ್ಡ್ ಐಸಾಕ್ ಲೋಬೊ ಶ್ಲಾಘನೆ | ಐವಾನ್ ಡಿಸೋಜಾಗೆ ಅಭಿನಂದನೆ

ಉಡುಪಿ: ಐವಾನ್ ಡಿಸೋಜಾ ಅವರು ಪರರಿಗಾಗಿ ಮಿಡಿಯುವ ಹೃದಯವಂತಿಕೆ ಉಳ್ಳವರು. ಅವರು ಕರಾವಳಿ ಭಾಗದ ಜನಸಾಮಾನ್ಯರ ಹಕ್ಕುಗಳ ಧ್ವನಿಯಾಗಿದ್ದಾರೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಉಡುಪಿಯ ಮಿಷನ್ ಕಾಂಪೌಂಡ್ನ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಉಡುಪಿ ಹಾಗೂ ವಿವಿಧ ಕ್ರೈಸ್ತ ಸಂಘಟನೆಗಳು ಹಾಗೂ ಜಿಲ್ಲೆಯ ಸಮಾನ ಮನಸ್ಕರು ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ನೂತನ ಸದಸ್ಯ ಐವನ್ ಡಿಸೋಜಾ ಅವರ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಜನಮನ್ನಣೆ ಪಡೆಯಲಿ

ಚಿಕ್ಕಂದಿನಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಂಡಿರುವ ಐವನ್, ಧ್ವನಿ ಇಲ್ಲದವರ ಧ್ವನಿಯಾಗಿ ಮುಂದೆಯೂ ತನ್ನ ಸೇವೆ ಮುಂದುವರಿಸುವAತಾಗಲಿ. ಜನರ ಬಳಿಗೇ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವೈಖರಿ ಮುಂದೆಯೂ ಜನಮನ್ನಣೆ ಪಡೆಯಲಿ ಎಂದರು.

ಎಲ್ಲ ಧರ್ಮಗಳಿಗೂ ಶಾಸಕ

ಸನ್ಮಾನ ಸ್ವೀಕರಿಸಿ ಮಾತನಾಡಿದ ಐವಾನ್ ಡಿಸೋಜಾ, ನಾನು ಎಲ್ಲ ವರ್ಗ, ಧರ್ಮಗಳಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ನನ್ನ ಕ್ರೈಸ್ತ ಸಮುದಾಯಕ್ಕೆ ಎಲ್ಲಿಯಾದರೂ ಅನ್ಯಾಯವಾದರೆ ಮೊದಲಿಗನಾಗಿ ದನಿ ಎತ್ತುವ ಕೆಲಸ ಮಾಡಲಿದ್ದೇನೆ. ರಾಜಕಾರಣ ಇಂದು ಹೂವಿನ ಹಾಸಿಗೆಯಲ್ಲ, ಅದು ಮುಳ್ಳಿನ ಹಾಸಿಗೆಯೂ ಕೂಡ ಆಗಿದೆ. ಹಿಂದೆ ಸದಸ್ಯನಾಗಿದ್ದಾಗ ಜಾತಿ, ಮತ, ಭೇದ ಮಾಡದೆ ಸಿಎಂ ವೈದ್ಯಕೀಯ ಪರಿಹಾರ ನಿಧಿಯಿಂದ ೭ ಕೋಟಿ ರೂಪಾಯಿಗೂ ಅಧಿಕ ಅನುದಾನ ತಂದ ಸಮಾಧಾನ ಇದೆ. ಅಭಿವೃದ್ಧಿಪರ ಕನಸು ಕಂಡಾಗ ಜನರು ಎಂದಿಗೂ ನಮ್ಮ ಕೈಬಿಡುವುದಿಲ್ಲ. ಮುಂದಿನ 6 ವರ್ಷ ಎಲ್ಲ ಸಮುದಾಯದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಿಎಸ್‌ಐ ಕೆಎಸ್‌ಡಿ ಉಡುಪಿ ಏರಿಯಾ ಕೌನ್ಸಿಲ್‌ನ ವಿಭಾಗ ಮುಖ್ಯಸ್ಥ ವಂ.ಐವಾನ್ ಡಿಸೋನ್ಸ್, ಉಡುಪಿ ಜಿಲ್ಲಾ ಫುಲ್ ಗೊಸ್ಪೆಲ್ ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಸೆಲ್ವಕುಮಾರ್, ಸೈಂಟ್ ಮೇರಿಸ್ ಸೀರಿಯ್ ಕ್ಯಾಥೆಡ್ರಲ್ ಬ್ರಹ್ಮಾವರದ ಪ್ರತಿನಿಧಿ ವಂ.ಎಂಟನಿ ಡಿಸಿಲ್ವಾ, ಯುನೈಟೆಡ್ ಬಾಸೆಲ್ ಮಿಷನ್ ಉಡುಪಿ ಜಿಲ್ಲಾ ಚರ್ಚ್ ಬೋರ್ಡ್ ಉಡುಪಿ, ದ.ಕ. ಮತ್ತು ಕೊಡಗಿನ ಮುಖ್ಯಸ್ಥ ವಂ.ವಿಜಯ್ ಹಾರ್ವಿನ್, ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ.ಡೆನಿಸ್ ಡೆಸಾ, ಮಹಿಳಾ ಸಂಘಟನೆ ಅಧ್ಯಕ್ಷೆ ಗ್ರೇಸಿ ಕುವೆಲ್ಲೊ, ಯುನೈಟೆಡ್ ಕ್ರಿಶ್ಚಿಯನ್ ಫೋರಂ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಐಸಿವೈಎಂ ಅಧ್ಯಕ್ಷ ಗೊಡ್ವಿನ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕರಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಘಟಕಿ ವೆರೋನಿಕಾ ಕರ್ನೆಲಿಯೋ ಸನ್ಮಾನಿತರ ಪರಿಚಯ ಮಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಂದಿಸಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಐವಾನ್ ಡಿಸೋಜಾ ವಿದ್ಯಾರ್ಥಿ ಜೀವನದಿಂದಲೇ ಸಿದ್ಧಾತಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಿರಂತರ ಜನಸೇವೆ ಮಾಡಿಕೊಂಡು ಬಂದವರು. ಮೊದಲ ಬಾರಿ ವಿಪ ಸದಸ್ಯರಾಗಿದ್ದಾಗ ಅತಿ ಹೆಚ್ಚು ಪ್ರಶ್ನೆ ಕೇಳಿ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವಕಾಶ ಸಿಕ್ಕಾಗ ಲಭ್ಯವಿದ್ದ ಅನುದಾನವನ್ನು ಎರಡೂ ಜಿಲ್ಲೆಗಳಿಗೆ ಒದಗಿಸಿದವರು. ವಿನಯಕುಮಾರ್ ಸೊರಕೆ. ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net