

ಮಂಡ್ಯ: ಅಮೆರಿಕಾದಲ್ಲಿರುವ ಕನ್ನಡ ಸಂಘಟನೆಗಳ ಒಕ್ಕೂಟ(ಅಕ್ಕ)ದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮಧು ರಂಗಯ್ಯ ಅವರು ಮಂಡ್ಯದ ಹೆಮ್ಮೆ ಎಂದು ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಕ ಸಂಘಟನೆ ನೂತನ ಅಧ್ಯಕ್ಷ ಮಧು ರಂಗಯ್ಯ ಅವರನ್ನು ನಗರದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿ ಅಮೆರಿಕಾದಲ್ಲಿ ಪಸರಿಸುತ್ತಿರುವ ನಿಟ್ಟಿನಲ್ಲಿ ಅಕ್ಕ ಸಂಘಟನೆ ಶ್ರಮಿಸುತ್ತಿದೆ. ಕರ್ನಾಟದಿಂದ ಸಪ್ತಸಾಗರಗಳ ಆಚೆ ಇದ್ದರೂ ಸಹ ಅಮೆರಿಕಾದಲ್ಲಿ ನೆಲೆಸಿರುವ ಪ್ರತಿಯೊಬ್ಬರ ಕನ್ನಡಿಗರ ಮನದಲ್ಲಿ ಕನ್ನಡತನವಿದೆ. ಜತೆಗೆ ತವರಿನ ಸೆಳೆತವಿದೆ. ಇದರಿಂದಾಗಿ ಅವರು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಇಂತಹ ಸಂಘಟನೆಗೆ ಮಂಡ್ಯ ಜಿಲ್ಲೆಯ ಮಧು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.
ಕನ್ನಡಿಗರೇ ಆದ ಅಮರ್‌ನಾಥ್‌ಗೌಡ ಅವರು ಎಲ್ಲ ಕನ್ನಡಿಗರನ್ನೂ ಒಗ್ಗೂಡಿಸಿ ಅಮೆರಿಕ ಕನ್ನಡ ಕೂಟಗಳ ಸಂಘವನ್ನು ಸ್ಥಾಪಿಸಿ ಇಡೀ ವಿಶ್ವದಲ್ಲೇ ಒಳ್ಳೆಯ ಸಮ್ಮೇಳನವನ್ನು ಆಯೋಜಿಸುತ್ತಿದ್ದರು. ಈ ನಿಟ್ಟಿನಲ್ಲಿ ಮಧು ರಂಗಯ್ಯ ಅವರೂ ಸಹ ಕಾರ್ಯೋನ್ಮುಖರಾಗಿದ್ದಾರೆ. ಅಮೆರಿಕಾವಷ್ಟೇ ಅಲ್ಲದೆ, ಕನ್ನಡ ನಾಡಿನ ಎಲ್ಲ ಮೂಲೆಗಳನ್ನೂ ತಲುಪಿ ರಾಜ್ಯದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.
ಮಧು ರಂಗಯ್ಯ ಅವರು ಮಂಡ್ಯ ಜಿಲ್ಲೆಯಿಂದಲೇ ಕಾರ್ಯಕ್ರಮ ಆರಂಭಿಸಿದ್ದಾರೆ. ಅಕ್ಕ ಬೆಳ್ಳಿ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ಮಂಡ್ಯ ನಗರದಲ್ಲಿ ಅಕ್ಕ ಚಾರಿಟಿ ಓಟ, ಅಮ್ಮನ ನಾಡಿನ ಅಕ್ಕರೆಯ ನಂಟು ಎಂಬ ಮ್ಯಾರಥಾನ್ ಏರ್ಪಡಿಸಿದ್ದಾರೆ. ಇದಕ್ಕೆ ಎಲ್ಲ ಸಾರ್ವಜನಿಕರು ಜತೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿದ ಅಕ್ಕ ಸಂಘಟನೆ ಅಧ್ಯಕ್ಷ ಮಧು ರಂಗಯ್ಯ ಮಾತನಾಡಿ, ಅಕ್ಕ ಸಂಘಟನೆಗೆ ಬೆಳ್ಳಿ ಹಬ್ಬದ ಸಂಭ್ರಮ. ಇಂತಹ ಹೊತ್ತಿನಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಖುಷಿಯ ಜತೆಗೆ ಜವಾಬ್ದಾರಿಯೂ ಹೆಚ್ಚಿಸಿದೆ. 2 ಸಾವಿರ ಅಜೀವ ಸದಸ್ಯರನ್ನೊಳಗೊಂಡಿರುವ ಅಕ್ಕ ಸಂಘಟನೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಸಮ್ಮೇಳನ ನಡೆಸಿ ಕನ್ನಡದ ನೆಲದಿಂದ ಪ್ರತಿಭಾವಂತರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಸಾತನೂರು ನಾಗ, ಬಾಬು, ಚೇತನ್, ಕನ್ನಡ ಸೇನೆ ಮಂಜುನಾಥ್ ಇತರರಿದ್ದರು.