

ಹಾಸನ: ನಗರದ ವಿಜಯ ಶಾಲೆಯಲ್ಲಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶದೊಂದಿಗೆ ಉತ್ತೀರ್ಣರಾದ 148 ವಿದ್ಯಾರ್ಥಿಗಳಿಗೆ ಗ್ರಾೃಜುಯೇಷನ್ ಸರ್ಟಿಫಿಕೇಟ್ ನೀಡುವ ಮೂಲಕ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ 600ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿಷಯವಾರು ಶೇಕಡ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಿಸಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಪಾಲಕರ ಸಹಕಾರದೊಂದಿಗೆ ಶಿಕ್ಷಣದ ಮೂಲಕ ಉನ್ನತ ಸ್ಥಾನ ಪಡೆಯುವ ಗುರಿಯೊಂದಿಗೆ ಮುನ್ನಡೆಯುವಂತೆ ಕರೆ ನೀಡಿದರು.
ನಾವು ತೆಗೆದುಕೊಳ್ಳುವ ನಿರ್ಧಾರದ ಮೂಲಕ ನಮ್ಮ ಜೀವನ ಮಾರ್ಗವನ್ನು ನಾವೇ ರೂಪಿಸಿಕೊಳ್ಳಬೇಕು. ಬಾಲಕಿಯರು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವುದರ ಜತೆಗೆ ಉನ್ನತ ಉದ್ಯೋಗ ಪಡೆಯುವಂತೆ ಕಿವಿಮಾತು ಹೇಳಿದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ.ಗಿರೀಶ್ ಮಾತನಾಡಿ, ಮಕ್ಕಳಿಗೆ ಬಲವಂತದಿಂದ ಶಿಕ್ಷಣ ನೀಡದೆ ಅವರು ಉನ್ನತ ಶಿಕ್ಷಣದ ಆಯ್ಕೆಯಲ್ಲಿ ಸ್ವತಂತ್ರರಾಗಿರಲು ಬಿಡಿ ಎಂದು ಕಿವಿಮಾತು ಹೇಳಿದರು.
ತಂದೆ-ತಾಯಿಯರ ನಂಬಿಕೆಯನ್ನು ಹುಸಿಗೊಳಿಸಬೇಡಿ, ಯಾರ ಮಾತಿಗೂ ಕಿವಿಗೊಡದೆ ಗುರಿ ಸಾಧಿಸುವ ಕಡೆ ಗಮನವಿರಿಸಬೇಕು. ಕಾಲೇಜು ಹಂತ ಜೀವನದ ಪ್ರಮುಖ ಘಟ್ಟವಾಗಿದ್ದು ಚಂಚಲ ಮನಸ್ಸನ್ನು ನಿಗ್ರಹಿಸಿ ಮತ್ತು ಜಾಲತಾಣಗಳನ್ನು ಅಭಿವೃದ್ಧಿ ಹೊಂದಲು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲಾ ಸಂಸ್ಥಾಪಕ ನಿರ್ದೇಶಕ ತಾರಾ ಎಸ್.ಸ್ವಾಮಿ ಮಾತನಾಡಿ, ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈದರೂ ಬೆಳವಣಿಗೆಗೆ ಸ್ಫೂರ್ತಿ ನೀಡಿದ ಶಾಲೆ, ಅಲ್ಲಿನ ಶಿಕ್ಷಕರು, ಹಾಗೂ ನಮ್ಮನ್ನು ಸಾಕಿ ಸಲಹಿದ ಪಾಲಕರು ಮತ್ತು ಹಿರಿಯರನ್ನು ಎಂದಿಗೂ ಮರೆಯದೆ ಸದಾ ಗೌರವಿಸುತ್ತಿರಬೇಕು ಎಂದರು.
ಶಾಲೆಯ ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ.ಶ್ರೀಲಕ್ಷ್ಮಿ, ಪ್ರಾಂಶುಪಾಲ ಕೆ.ಎಸ್.ನಂದೀಶ, ಶಿಕ್ಷಕರು, ಸಿಬ್ಬಂದಿ ಇದ್ದರು.