

ವಿಜಯಪುರ: ರಾಜ್ಯದಲ್ಲಿ ವಕ್ಫ್ ಬಗ್ಗೆ ಧ್ವನಿ ಎತ್ತಿದ ಶಾಸಕ ಯತ್ನಾಳ ಹಾಗೂ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ರ್ನಾಟಕ ಮುಲ್ಲಾ ಅಸೋಸಿಯೇಶನ್ ತಿಳಿಸಿದೆ.
ಬಿಜೆಪಿಯ ಈ ನಿರ್ಧಾರದಿಂದಾಗಿ ಅಧಿಕಾರಿಗಳು ಪಹಣಿಯಲ್ಲಿನ ವಕ್ಫ್ ಪದ ತೆರವಾಗಲಿದೆ. ಇದರಿಂದ ನ್ಯಾಯಾಂಗ ಹೋರಾಟ ನಡೆಸಿರುವ ಅನೇಕ ಮುಸಲ್ಮಾನರಿಗೆ ಅನುಕೂಲವೇ ಆಗಲಿದೆ. ಬಿಜೆಪಿಯ ಹೋರಾಟದಿಂದಾಗಿ ಪಹಣಿಯಲ್ಲಿನ ವಕ್ಫ್ ಪದ ತೆಗೆದು ಹಾಕಿದಂತೆ ಜಿಲ್ಲಾಡಳಿತ ಎಲ್ಲ ಪಹಣಿಗಳಲ್ಲಿನ ವಕ್ಫ್ ಪದ ಅಳಿಸಿ ಹಾಕಬೇಕೆಂದು ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ವಕ್ಫ್ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿದ್ದಂತೆ ಇಂಡಿ ತಾಲೂಕಿನ ಕೆಲವು ಪಹಣಿಯಲ್ಲಿ ಉಲ್ಲೇಖಿಸಲಾಗಿದ್ದ ವಕ್ಫ್ ಪದ ತೆಗೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಾಗಾದರೆ ಸೇರ್ಪಡೆ ಮಾಡುವಾಗ ಯಾವ ಆಧಾರದ ಮೇಲೆ ಮಾಡಲಾಗಿತ್ತು. ಇದೀಗ ತೆಗೆದಿದ್ದಾದರೂ ಯಾವ ಆಧಾರದ ಮೇಲೆ? ಈ ನಿಯಮ ಹಿಂದಿನ ಪ್ರಕರಣಗಳಿಗೇಕೆ ಅನ್ವಯವಾಗುತ್ತಿಲ್ಲ ಎಂದು ಪ್ರಶ್ನಿಸಿರುವ ಮುಲ್ಲಾ, ಇಂಡಿ ತಾಲೂಕಿನ 42 ಜಮೀನು ಪಹಣಿಯಲ್ಲಿ ಉಲ್ಲೇಖಗೊಂಡಿದ್ದ ‘ವಕ್ಫ್’ ಪದವನ್ನು ಬದಲಾವಣೆ ಮಾಡಿದಂತೆಯೇ ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಸೇರ್ಪಡೆಯಾಗಿದ್ದ ‘ವಕ್ಫ್’ ಪದವನ್ನೂ ತೆಗೆದು ಹಾಕಬೇಕು ಎಂದರು.
ಈಗಾಗಲೇ ಮುಲ್ಲಾ, ಜಹಾಗೀರದಾರ, ಇನಾಮದಾರ, ಮುಜಾವರ ಹೀಗೆ ಅನೇಕ ಜನರ ಇನಾಮ್ ಜಮೀನುಗಳಲ್ಲಿಯೂ ವಕ್ಫ್ ಎಂದು ಸೇರ್ಪಡೆಯಾಗಿದೆ. ಅವುಗಳಲ್ಲಿರುವ ವಕ್ಫ್ ಪದವನ್ನೂ ತೆಗೆದು ಹಾಕಬೇಕು ಎಂದ ಮುಲ್ಲಾ, ನೊಟೀಸ್ ನೀಡದೇ ವಕ್ಫ್ ಪದ ಸೇರ್ಪಡೆ ಮಾಡಿದ್ದಾಗಿಯೂ ಇದೀಗ ಅಂಥವುಗಳನ್ನು ತೆಗೆದು ಹಾಕಲಾಗಿದೆ ಎಂದರೆ ಅಂಥ ಪ್ರಕರಣಗಳು ಇನ್ನೂ ಬಹಳಷ್ಟು ಇವೆ. ಅವುಗಳನ್ನೂ ತೆಗೆದು ಹಾಕಬೇಲ್ಲವೇ? ಎಂದರು.
ಯಾವಾಗ ಬೇಕಾದರೂ ನೋಂದಣಿ ಆಗಲಿ. ಆ ಕಾನೂನು ಎಲ್ಲರಿಗೂ ಅನ್ವಯ ಆಗಬೇಕಲ್ಲವೇ? ಒಂದೇ ತಾಲೂಕಿನ ಪ್ರಕರಣಗಳಲ್ಲಿ ಮಾತ್ರ ಉಲ್ಲೇಖಿತ ವಕ್ಫ್ ತೆಗೆದು ಹಾಕಿದ್ದೇಕೆ? ಟಾಸ್ಕ್ ಫೋರ್ಸ್ ಸಭೆ ಕರೆದು ತೆಗೆಯುವುದಾಗಿ ಹೇಳಿದರೆ ಇಂಡಿ ತಾಲೂಕಿನ ಪ್ರಕರಣ ಸೇರಿ ಎಲ್ಲವೂ ಟಾಸ್ಕ್ ಪೋರ್ಸ್ ಮುಂದೆ ಬರಲಿ. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡರಾದ ಡಾ.ಔಬಕರ ಮುಲ್ಲಾ, ಶಹಾಜಾನ್ ಮುಲ್ಲಾ, ರಿಜಬಾನ್ ಮುಲ್ಲಾ, ಬಂದೇನವಾಜ್ ಮುಲ್ಲಾ, ಇಮಾಮ್ ಮುಲ್ಲಾ ಮತ್ತಿತರರಿದ್ದರು.