ಬಳ್ಳಾರಿ; ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರದ ಅನುದಾನವಿಲ್ಲದೆ ಅವಳಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿದ್ದವು. ಇದೀಗ ಸಂಸದ ನಿಧಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 4.90 ಕೋಟಿ ರೂ. ಅನುಮೋದನೆ ದೊರೆತಿದೆ.
ಕಳೆದ ಸಾಲಿನ 2024- 25ನೇ ಸಾಲಿನ ಸಂಸದರ ಅನುದಾನದಲ್ಲಿ ಅವಳಿ ಜಿಲ್ಲಾದ್ಯಂತ ಡಿಜಿಟಲ್ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, ಪೀಠೋಪಕರಣಗಳು, ಸಮುದಾಯ ಭವನಗಳು, ಟ್ರಸ್ಟ್‌ಗಳಿಗೆ ಅನುದಾನ, ವಿಶೇಷ ಚೇತನರಿಗೆ ತ್ರಿಚಕ್ರ ಬೈಕ್, ವಿಶೇಷ ಚೇತನರಿಗೆ ಶ್ರವಣ ಸಾಧನ, ಕೃಷಿ ಚಟುವಟಿಕೆಗಳು, ಆರೋಗ್ಯ ಕ್ಷೇತ್ರಕ್ಕೆ ಅನುಕೂಲವಾಗುವ ಉದ್ದೇಶದಿಂದ ಅಂಬ್ಯುಲೆನ್ಸ್, ಬಸ್ ತಂಗುದಾಣ ಹಾಗೂ ಇತರೆ ಸಿವಿಲ್ ಕಾಮಗಾರಿಗಳನ್ನು ಕೋಟ್ಯಾಂತರ ವೆಚ್ಚದಲ್ಲಿ ರೂ. ಕೆಲ ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ.
ಯಾವ ಕ್ಷೇತ್ರಕ್ಕೆ ಎಷ್ಟು : ಸಂಡೂರು 82 ಲಕ್ಷ ರೂ., ಬಳ್ಳಾರಿ ನಗರ ಮತ್ತು ಗ್ರಾಮೀಣಕ್ಕೆ 1.01 ಕೋಟಿ ರೂ., ಹಗರಿಬೊಮ್ಮನಹಳ್ಳಿ 82 ಲಕ್ಷ ರೂ., ಕೂಡ್ಲಿಗಿ 67 ಲಕ್ಷ ರೂ., ಹೊಸಪೇಟೆ 92 ಲಕ್ಷ ರೂ., ಹೂವಿಹಡಗಲಿ 66 ಲಕ್ಷ ರೂ. ಸೇರಿದಂತೆ 4.90 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಬಳ್ಳಾರಿ ನಗರ ಹಾಗೂ ಗ್ರಾಮೀಣ ಎರಡು ಸೇರಿ ಒಟ್ಟು ಒಂದು ಕೋಟಿ ರೂ. ಅನುದಾನ ಹಂಚಿಕೆ ಮಾಡಿರುವ ಸಂಸದರು ತವರು ಕ್ಷೇತ್ರದ ಸಂಡೂರಿಗೆ ಬರೋಬ್ಬರಿ 82 ಲಕ್ಷ ರೂ. ಅನುದಾನ ನೀಡಿದ್ದಾರೆ. ಅಲ್ಲದೆ, ಸಂಡೂರಿಗೆ ಕೆಎಂಆರ್‌ಸಿ, ಡಿಎಂಎಫ್ ಅನುದಾನವನ್ನು ಆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆಯಲಿದ್ದು, ಬೇರೆ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ ಇನ್ನೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಂಪ್ಲಿಗೆ ಶೂನ್ಯ : ಸಂಸದ ಈ.ತುಕಾರಾಮ್ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅಪ್ತರ ಬಣದಲ್ಲಿ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಜೆ.ಎನ್.ಗಣೇಶ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಕೆಲ ತಿಂಗಳ ಹಿಂದೆ ನಡೆದ ಸಂಡೂರು ಉಪಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಸ್ವತಃ ಜೆ.ಎನ್.ಗಣೇಶ ಅಬ್ಬರ ಪ್ರಚಾರ ನಡೆಸಿ ಶಾಸಕಿ ಅನ್ನಪೂರ್ಣ ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ, ಅನುದಾನ ಹಂಚಿಕೆಯಲ್ಲಿ ಕಂಪ್ಲಿಗೆ ಒಂದು ಕಾಮಗಾರಿ ಉದ್ದೇಶಿಸಲು ಕೈಗೊಂಡಿಲ್ಲ. ಕಂಪ್ಲಿ ಕ್ಷೇತ್ರಕ್ಕೆ ಕುರುಗೋಡು ತಾಲೂಕು ಕೂಡ ಸೇರಿದೆ. ಎರಡು ಕ್ಷೇತ್ರಗಳಲ್ಲಿ ಹದಗೆಟ್ಟ ರಸ್ತೆಗಳು, ಶಾಲೆಗಳ ದುರಸ್ತಿ ಕಾರ್ಯ ಸೇರಿದಂತೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಸಂಸದರ ನಿಧಿಯಿಂದ ಬಿಡುಗಡೆಯಾಗುವ ಅನುದಾನ ಮೂಲಕ ಕೆಲ ಕಾಮಗಾರಿಗಳು ಪೂರ್ಣಗೊಳಿಸುವ ಆಸೆ ಮತ್ತೋಮ್ಮೆ ಕಮರಿದೆ. ಕುಡಿತಿನಿ ಬಳಿಯ ರೈಲು ಮೇಲಸೇತುವೆ ನಿಧಾನಗತಿಯ ಕಾಮಗಾರಿಯಿಂದ ಸಾರ್ವಜನಿಕರು ಹೈರಾಣಗಿದ್ದಾರೆ.
ಮೇಲ ಸೇತುವೆಗೆ ಅನುಮೋದನೆ : ಕಳೆದ ಹತ್ತು ವರ್ಷಗಳಿಂದ ಇಲ್ಲಿನ ರೇಡಿಯೊ ಪಾರ್ಕ್ ಬಳಿ ರೈಲು ಮೇಲಸೇತುವೆ ಅರೆಬರೆ ಕಾಮಗಾರಿಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಸಂಸದರ ಇಚ್ಛಾಶಕ್ತಿಯಿಂದ ಮೇಲು ಸೇತುವೆ ಕಾಮಗಾರಿ ಆರಂಭಿಸಲು ಅನುಮೋದನೆ ದೊರೆತಿದೆ. ಆದರೆ, ನಗರ ಸುಧಾ ಕ್ರಾಸ್ ಬಳಿ ರೈಲು ಮೇಲು ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು ಒಂದೇ ಬಾರಿ ಆರಂಭಿಸಿದರೆ ವಾಹನ ಸವಾರರಿಗೆ ಸಂಚರಿಸಲು ಅನನುಕೂಲವಾಗಲಿದೆ ಎಂಬ ಉದ್ದೇಶದಿಂದ ಆ ಕಾಮಗಾರಿ ಪೂರ್ಣಗೊಂಡ ಬಳಿಕ ಇದನ್ನು ಆರಂಭಿಸಲಾಗುವುದು ಎಂದು ಇಲಾಖೆಯ ಸಚಿವರ ಅಪ್ತರೊಬ್ಬರು ತಿಳಿಸಿದರು.
ಕೋಟ್... ಅವಳಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಕೆಲವೊಂದು ಪ್ರಕ್ರಿಯೆಗಳು ಪೂರ್ಣಗೊಳಿಸಿ ಕೆಲ ದಿನಗಳಲ್ಲೆ ಕಾಮಗಾರಿ ಆರಂಭಿಸಲಾಗುವುದು.
- ಈ.ತುಕಾರಾಮ್, ಸಂಸದ, ಬಳ್ಳಾರಿ.