

ಮಂಡ್ಯ: ಸಾಂಸ್ಕೃತಿಕ ವಾತಾವರಣ ಇಲ್ಲದ ಸಮಾಜ ಮಾನವೀಯ ಗುಣವಿಲ್ಲದ ನೆಲೆಯಾಗುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸಾಂಸ್ಕ್ರತಿಕ ವಾತಾವರಣ ಸಮೃದ್ಧವಾಗಿದೆ. ನಿತ್ಯಸಚಿವ ಕೆ.ವಿ.ಶಂಕರಗೌಡರು ಇಂತಹ ಸ್ಥಿತಿ ಕಂಡಿದ್ದರೆ ಸಂಭ್ರಮಪಡುತ್ತಿದ್ದರು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಾನಪದ ಪರಿಷತ್ತು ಮಂಡ್ಯ ತಾಲೂಕು ಘಟಕ, ಕಲಾವಿದರ ಬಳಗದಿಂದ ಹಮ್ಮಿಕೊಂಡಿದ್ದ ಜಾನಪದ ಕಲಾವಿದ ಉಮಾಶಂಕರ್‌ಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಕಲಾವಿದರು ಸಿನಿಮಾದಲ್ಲಿ ಹಾಡುವ ಗಾಯಕರಿಗಿಂತ ಕಡಿಮೆ ಏನಿಲ್ಲ. ಕೌಶಲತೆ ಬೆಳೆಸಿಕೊಂಡರೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಶ್ರಮ, ಪ್ರಯತ್ನ ಹಾಕಬೇಕು ಅಷ್ಟೇ ಎಂದು ಸಲಹೆ ನೀಡಿದರು.
ಕೆಲವರು ಈಗ ಜಾನಪದವನ್ನು ಫ್ಯಾಷನ್ ಆಗಿ ಮಾಡಿಕೊಂಡು ಹಾಡುತ್ತಾರೆ. ಆದರೆ ಅದು ತಯಾರಾದ ದನಿ. ನಮ್ಮವರದು ಹುಟ್ಟು ದನಿ. ಈ ನಿಟ್ಟಿನಲ್ಲಿ ದೊಡ್ಡ ದೊಡ್ಡ ಉತ್ಸವ, ಮೇಳಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಹೆಚ್ಚಿನ ಸಂಭಾವನೆ ಕೊಡಬೇಕು ಜಿಲ್ಲಾಡಳಿತಕ್ಕೆ ಇದು ನನ್ನ ಆಗ್ರಹಪೂರ್ವಕ ಒತ್ತಾಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕಲಾವಿದರು ಈ ಭುವನದ ಗಂಧರ್ವರು. ನಮ್ಮ ಜಿಲ್ಲೆಯ ಕಲಾವಿದರು ಬಹಳ ಗಟ್ಟಿಗರು, ಮೃದುಹೃದಯಿಗಳು, ಭಾಷಾಭಿಮಾನಿಗಳು, ನೆಲ ಜಲದ ಹೋರಾಟಕ್ಕೆ ಸದಾ ಸಿದ್ಧರು ಇಂತಹವರನ್ನು ಪಡೆದ ಜಿಲ್ಲೆ ಧನ್ಯ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಶೇಖರ್, ಶಿಕ್ಷಕಿ ರತ್ನಾಜೈನ್ ಇತರರಿದ್ದರು.
ಇದೇ ವೇಳೆ ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಹಿರಿಯ ತಬಲವಾದಕ ವೆಂಕಟೇಶ್, ಹಿರಿಯ ಜಾನಪದ ಕಲಾವಿದೆ ಬೇವಿನಹಳ್ಳಿ ನಂಜಮ್ಮ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಶಿವಾರ ಉಮೇಶ್, ಪ್ರದೀಪ್, ಗೆಜ್ಜಲಗೆರೆ ಗಂಗಾಧರ್, ಹೊಂಬೇಗೌಡ ಹೆಬ್ಬಕವಾಡಿ, ಸೌಮ್ಯಾ, ಸಂಪಹಳ್ಳಿ ಬಸವರಾಜು ಗಾಯನ ನಡೆಸಿಕೊಟ್ಟರು.