

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರ ಅಭಿನಂದನಾ ಸಮಾರಂಭ ಹಾಗೂ "ಘನಮನಸಂಪನ್ನರು' ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ಸೆ. 22ರಂದು ಬೆಳಗ್ಗೆ 10.30ಕ್ಕೆ ಕವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಅಭಿನಂದನ ಸಮಿತಿ ಗೌರವಾಧ್ಯಕ್ಷ ಪ್ರೊ. ವೀರಣ್ಣ ರಾಜೂರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಶ್ರೀ ನಿರುಪಾಧೀಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಎಂ.ಸಿ. ಸುಧಾಕರ, ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎಸ್.ವಿ. ಸಂಕನೂರ, ಶಶಿಕಲಾ ಜೊಲ್ಲೆ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಇತರರು ಆಗಮಿಸಲಿದ್ದಾರೆ ಎಂದರು.
ಸೆ. 21ರಂದು ಬೆಳಗ್ಗೆ 10 ಗಂಟೆಗೆ ಗೋಲ್ಡನ್ ಜ್ಯುಬ್ಲಿ ಸಭಾಂಗಣದಲ್ಲಿ ಏರ್ಪಡಿಸಿರುವ ಕೆ.ಬಿ. ಗುಡಸಿ ಅವರ ನೆಚ್ಚಿನ ಕ್ಷೇತ್ರಗಳಾದ ಶಿಕ್ಷಣ, ವಿಜ್ಞಾನ ಹಾಗೂ ನಾಯಕತ್ವ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ 4 ಗೋಷ್ಠಿಗಳು ನಡೆಯಲಿವೆ. ಡಾ.ಟಿ. ರಾಮಸ್ವಾಮಿ, ಡಾ. ತೇಜರಾಜ ಅಮಿನಭಾವಿ, ಡಾ. ವಿ.ಕೆ. ಅತ್ರೆ, ಡಾ. ಎಸ್.ಎಂ. ಶಿವಪ್ರಸಾದ, ಡಾ. ಎಂ.ಕೆ. ಶ್ರೀಧರ, ಡಾ. ಸಿದ್ದು ಅಲಗೂರ, ಡಾ. ಸಂದೀಪ ಶಾಸ್ತ್ರಿ, ಡಾ. ಎಂ.ಎಸ್. ಸುಭಾಷ, ಡಾ. ಎನ್.ಆರ್. ಭಾನುಮೂರ್ತಿ, ಡಾ. ಗೋಪಾಲ ಖಡೆಕೋಡೆ ಭಾಗವಹಿಸಲಿದ್ದಾರೆ ಎಂದರು.
ಗುಡಸಿ ಅವರು 4 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ವಿವಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲರನ್ನೂ ಒಟ್ಟಾಗಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಅವರು ನಿವೃತ್ತಿ ಹೊಂದುತ್ತಿರುವುದರಿಂದ ಅಭಿನಂದನೆ ಸಲ್ಲಿಸುವುದು ನಮ್ಮ ಸಂಸ್ಕೃತಿ. ಹೀಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.