ಗುರುಗಳಿಗೆ ಅಭಿನಂದನೆ ಸಲ್ಲಿಸುವುದು ಭಾರತೀಯ ಸಂಸ್ಕೃತಿ: ಕುಲಪತಿ ಡಾ.ಎಚ್.ಬಸವನಗೌಡಪ್ಪ

17
Published on

ಮೈಸೂರು: ಕಲಿತ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಅತ್ಯಮೂಲ್ಯವಾದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವುದು ಭಾರತೀಯ ಉತ್ತಮ ಸಂಸ್ಕೃತಿ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಜೆಎಸ್‌ಎಸ್‌ಎಎಚ್‌ಇಆರ್) ಕುಲಪತಿ ಡಾ.ಎಚ್.ಬಸವನಗೌಡಪ್ಪ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್‌ಎಎಚ್‌ಇಆರ್) ಯಿಂದ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯಿಂದ ಬನ್ನಿಮಂಟಪದ ಶನಿವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಮ್ಮಿಲನ ‘ಹಿಂದಿರುಗಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇರೆ ಬೇರೆ ಕಡೆ ಕಾರ್ಯನಿರ್ವಹಿಸುತ್ತಿರುವ ನೂರಾರು ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ, ತಮ್ಮ ಹಳೆಯ ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಿರುವುದು ಹೊಸ ಚೈತನ್ಯವನ್ನು ನೀಡಿದಂತಿದೆ ಎಂದರು.

ಹಳೇ ವಿದ್ಯಾರ್ಥಿಗಳಾದ ನಾವೆಲ್ಲರೂ 20 ವರ್ಷಗಳ ಬಳಿಕ ಒಂದೇ ವೇದಿಕೆಯಡಿ ಮತ್ತೆ ಒಂದಾಗಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ಜತೆಯಾಗಿದ್ದ ನೆನಪನ್ನು ಮತ್ತೊಮ್ಮೆ ಮರುಕಳಿಸಿ, ನೆನಪಿಸುವ ಯೋಜನೆ ಯಶಸ್ವಿಯಾಗಿದೆ. ಶಿಕ್ಷಣ ಮುಗಿಸಿ ಹೊರಬಂದ ಬಳಿಕ ಬದುಕಿನ ಚಿತ್ರಣ ಹಂಚಿಕೊಳ್ಳುವಲ್ಲಿ ಈ ಮರುಸಮ್ಮಿಲನ ಸಹಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದರು.

ಸುವರ್ಣ ಮಹೋತ್ಸವದ ನಂತರದ ಆಚರಣೆಯ ಮೈಲಿಗಲ್ಲಿನ ನೆನಪಿಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದೆ. ಅವುಗಳೆಂದರೆ ಹಳೆಯ ವಿದ್ಯಾರ್ಥಿಗಳ ಅತಿಥಿ ಉಪನ್ಯಾಸ ಸರಣಿ, ಪ್ರಪಂಚದಾದ್ಯಂತ ಹಳೆಯ ವಿದ್ಯಾರ್ಥಿಗಳ ಸಭೆ, ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಸ್ಪರ್ಧೆಗಳು, ಕ್ರೀಡಾ ಕಾರ್ಯಕ್ರಮಗಳು ಮತ್ತು ಅದರ ಹಳೆಯ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವುದು, ಅದರ ಮಾಜಿ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸುವುದು ಎಂದು ವಿವರಿಸಿದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್‌ಎಎಚ್‌ಇಆರ್) ಸಮಕುಲಾಧಿಪತಿ ಡಾ.ಬಿ.ಸುರೇಶ್ ಮಾತನಾಡಿ, ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯನ್ನು ಹೆಚ್ಚಿಸುವಲ್ಲಿ ನಾಯಕತ್ವ ಮತ್ತು ಆಡಳಿತ ಮಂಡಳಿಯ ಪ್ರಯತ್ನಗಳನ್ನು ಶ್ಲಾಘಿಸಿದರು.

ಈ ಸಂಸ್ಥೆಯು ಉನ್ನತ ನೈತಿಕ ಸ್ಥೈರ್ಯ, ಗುಣಮಟ್ಟ ಮತ್ತು ಶಿಸ್ತು ಹೊಂದಿರುವ ಫಾರ್ಮಾಸಿಸ್ಟ್‌ಗಳ ವಿಷಯದಲ್ಲಿ ಔಷಧ ಶಿಕ್ಷಣ ಮತ್ತು ಸಂಶೋಧನೆಗೆ ಸಾಕಷ್ಟು ಕೊಡುಗೆ ನೀಡಿದೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಒಟ್ಟು 450 ಹಳೆಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು ಈ ಸಭೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್‌ಕುಮಾರ್, ಉಪ ಪ್ರಾಂಶುಪಾಲ ಡಾ.ಜಿ.ವಿ.ಪೂಜಾರ್, ಸಂಯೋಜಕರಾದ ಡಾ.ಸೀಮಾ, ಡಾ.ಹೇಮಂತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net