

ಹೇಮನಾಥ್ ಪಡುಬಿದ್ರಿ
ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಕಾಪು ತಾಲೂಕಿನ ಕಾಪು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಗಳಿಗೆ ಸೂಕ್ತ ಜಾಗವಿಲ್ಲದೆ ಜಪ್ತಿ ಮಾಡುವ ವಾಹನ ನಿಲುಗಡೆಗೊಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಎರಡೂ ಠಾಣೆಗಳ ವ್ಯಾಪ್ತಿಯ ಹೆದ್ದಾರಿಯಲ್ಲಿ ಒಂದಿಲ್ಲೊಂದು ವಾಹನ ಅಪಘಾತಗಳ ಸಹಿತ ಇತರ ಪ್ರಕರಣಗಳು ದಾಖಲಾದರೆ ಜಪ್ತಿ ಮಾಡಿದ ವಾಹನಗಳನ್ನು ತಂದು ಪ್ರಕರಣದ ಇತ್ಯರ್ಥಗೊಳ್ಳುವ ತನಕ ಠಾಣೆ ಮುಂದೆಯೇ ನಿಲ್ಲಿಸಬೇಕಾದ ಕರ್ತವ್ಯ ಪೊಲೀಸರದು. ಕೇವಲ 30ರಿಂದ 35 ಸೆಂಟ್ಸ್ ಜಾಗದಲ್ಲಿ ನಿರ್ಮಾಣಗೊಂಡ ಕಾಪು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಗಳಿಗೆ ಎಲ್ಲ ವ್ಯವಸ್ಥೆಗಳಿದ್ದರೂ, ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶವೇ ಇಲ್ಲ. ಈ ಕಾರಣಕ್ಕಾಗಿ ಪೊಲೀಸರು ರಸ್ತೆಯಲ್ಲೇ ನಿಲುಗಡೆಗೊಳಿಸುತ್ತಿದ್ದು, ಸಾರ್ವಜನಿಕರ ಸಹಿತ ಸ್ಥಳೀಯಾಡಳಿತದ ಟೀಕೆಗೆ ಗುರಿಯಾಗಿದ್ದಾರೆ.
ಕಾಪು ಪೊಲೀಸ್ ಠಾಣೆ ಒಂದು ಪಾರ್ಶ್ವದಲ್ಲಿ ಹೆದ್ದಾರಿ ಹೋಗುತ್ತಿದ್ದರೆ. ಇನ್ನೊಂದು ಪಾರ್ಶ್ವದಲ್ಲಿ ಕಾಪು ಪೇಟೆ ಒಳಗೊಂಡಿದೆ. ಠಾಣೆ ಆಸುಪಾಸಿನಲ್ಲಿ ಬಸ್ ನಿಲ್ದಾಣ, ಮೂರು ಮಾರಿಗುಡಿಗಳ ಸಹಿತ ದೇವಸ್ಥಾನ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೆಸ್ಕಾಂ ಕಚೇರಿ ಇದ್ದು, ಅಲ್ಲಿಗೆ ತೆರಳುವ ಮಂದಿಗೆ ಜಪ್ತಿ ವಾಹನಗಳಿಂದಾಗಿ ತೊಂದರೆಯಾಗುತ್ತಿದೆ. ಅದಲ್ಲದೆ ದೇವಸ್ಥಾನ ಉತ್ಸವ ವಾರದ ಸಂತೆ ದಿನಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಸಂಚಕಾರ ತರುತ್ತಿದೆ. ವಾಹನಗಳ ತೆರವುಗೊಳಿಸವಂತೆ ಠಾಣಾಧಿಕಾರಿಗಳಿಗೆ ಪುರಸಭೆಯಿಂದ ನೋಟಿಸ್ ಕೂಡ ನೀಡಲಾಗಿದೆ.
ಇಪ್ಪತ್ತು ವರ್ಷಗಳ ಹಿಂದೆ ಸಂತೆ ಮಾರುಕಟ್ಟೆ ಪ್ರದೇಶದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಲ್ಲಿಂದ ಅಂದಿನಿಂದ ಇಂದಿನವರೆಗಿನ ಪ್ರಕರಣಗಳಿಗೆ ಸಂಬಂಧಿಸಿ ಜಪ್ತಿ ಮಾಡಿರುವ ವಾಹನಗಳು ಪಡುಬಿದ್ರಿ ಠಾಣೆ ಮುಂದಿನ ರಸ್ತೆಯಲ್ಲಿ ಪಾಳುಬಿದ್ದಿವೆ. ಠಾಣೆ ಆಸುಪಾಸು ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ಸಂಚಾರಕ್ಕೆ ಹರಸಹಾಸ ಪಡಬೇಕಾಗಿದೆ. ವಾರದ ಸಂತೆ ನಡೆಯುವ ಮಂಗಳವಾರವಂತೂ ನಡೆದಾಡಲೂ ಕಷ್ಟದ ಪರಿಸ್ಥಿತಿ ಇದ್ದು, ವಾಹನಗಳ ತೆರವಿಗೆ ಸಾರ್ವಜನಿಕರೇ ಸ್ಥಳೀಯಾಡಳಿತ ಜತೆಗೂಡಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಎರಡೂ ಠಾಣೆಗಳಿಗೆ ಜಪ್ತಿಗೊಳಿಸಿದ ವಾಹನಗಳನ್ನು ಇರಿಸಲು ಸೂಕ್ತ ಸ್ಥಳಾವಕಾಶ ಅಗತ್ಯವಿದ್ದು, ಸ್ಥಳೀಯಾಡಳಿತ ಸಹಿತ ಕಂದಾಯ ಇಲಾಖೆ ಈ ಕುರಿತು ಕ್ರಮಕ್ಕೆ ಮುಂದಾಗಬೇಕಿದೆ.
ಠಾಣೆಯಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆಯಿದ್ದು, ಜಪ್ತಿಗೊಳಿಸದ ವಾಹನಗಳನ್ನು ರಸ್ತೆ ಮೇಲೆ ನಿಲುಗಡೆಗೊಳಿಸಬೇಕಿದೆ. ಸ್ಥಳಿಯಾಡಳಿತ ಕೇವಲ ನೋಟಿಸ್ ನೀಡಿದರೆ ಸಾಲದು. ಪೊಲೀಸ್ ಕೂಡ ಸರ್ಕಾರಿ ಇಲಾಖೆಯೇ ಆಗಿರುವುದರಿಂದ ಸೂಕ್ತ ಜಮೀನು ಗುರುತಿಸಿ ನೀಡುವ ಕೆಲಸವೂ ಆಗಬೇಕಿದೆ. ಈ ಕುರಿತು ಕಂದಾಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು. -ತೇಜಸ್ವಿ, ಕಾಪು ಠಾಣಾಧಿಕಾರಿ ಠಾಣೆ ಆರಂಭಗೊಂಡಲ್ಲಿಂದ ಪ್ರಕರಣಗಳಿಗೆ ಸಂಬಂಧಿಸಿದ ವಾಹನಗಳೂ ಇಲ್ಲಿವೆ. ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಗ್ರಾಪಂ ಜಮೀನು ಗುರುತಿಸಿ ನೀಡಿದಲ್ಲಿ ವಾಹನಗಳ ಸ್ಥಳಾಂತರ ಮಾಡಲು ಕ್ರಮವಹಿಸಲಾಗುವುದು. -ಪ್ರಸನ್ನ ಎಂ.ಎಸ್, ಪಡುಬಿದ್ರಿ ಠಾಣಾಧಿಕಾರಿ ವಾಹನ ನಿಲುಗಡೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಗೆ ನೋಟಿಸ್ ನೀಡಲಾಗಿದೆ. ಪರ್ಯಾಯ ಸ್ಥಳ ಲಭಿಸುವವರೆಗೆ ಅವಕಾಶ ನೀಡುವಂತೆ ಪೊಲೀಸರು ಮೌಖಿಕ ಮನವಿ ಮಾಡಿದ್ದಾರೆ. -ನಾಗರಾಜ್ ಸಿ., ಕಾಪು ಪುರಸಭೆ ಮುಖ್ಯಾಧಿಕಾರಿ https://www.vijayavani.net/officials-inspect-uchilla-accident-site https://www.vijayavani.net/indian-democracy-is-the-best-in-the-world