

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶ್ರೀ ರಾಮಜನ್ಮ ಭೂಮಿ, ದತ್ತ ಪೀಠ ಹೋರಾಟ ನಡೆಸಿದರೂ ರಾಜ್ಯದಲ್ಲಿ ಬಿಜೆಪಿ ಒಮ್ಮೆಯೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ಹಲವು ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಿದೆ. ಕಾಂಗ್ರೆಸ್ ಹಿಂದು ವಿರೋಧಿಯಾಗಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುಗಳ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ, ಒಮ್ಮೆಯೂ ಅವರು ಮ್ಯಾಜಿಕ್ ನಂಬರ್ (ಬಹುಮತ) ದಾಟಿಲ್ಲ. ದತ್ತಪೀಠ ಹೋರಾಟದ ಕೇಂದ್ರ ಸ್ಥಳವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಒಂದೂ ಸ್ಥಾನವು ಗೆದ್ದಿಲ್ಲ ಎಂದರು.
ಇಂಥ ಭಾವನಾತ್ಮಕ ವಿಷಯಗಳು ರಾಜಕಾರಣದಲ್ಲಿ ಬಹಳ ದಿನ ನಡೆಯುವುದಿಲ್ಲ. ಅಭಿವೃದ್ಧಿ ವಿಷಯಗಳು, ಮಾಡಿರುವ ಕೆಲಸಗಳು ಚರ್ಚೆಯಾಗಬೇಕು. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕು ಎಂದು ಕುಟುಕಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಆಗಬೇಕು ಎಂಬುದು ನನ್ನನ್ನು ಸೇರಿದಂತೆ ನೂರಾರು ಕೋಟಿ ಜನರ ಅಭಿಲಾಷೆ. ಅದಕ್ಕೆ ತಕ್ಕಂತೆ ಸುಪ್ರೀಂ ಕೋರ್ಟ್ ತೀರ್ಪು ಸಹ ಇದೆ. ಇದೀಗ ಮಂದಿರ ನಿರ್ವಣವಾಗುತ್ತಿರುವುದು ಖುಷಿಯ ಸಂಗತಿ. ಆದರೆ, ರಾಮಮಂದಿರ ವಿಷಯವನ್ನು ಬಿಜೆಪಿಯವರು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂದರು.