

ಹುಬ್ಬಳ್ಳಿ: ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತ ಕಂಡಿರುವ ಜನರಿಗೆ ಸ್ವಾತಂತ್ರ್ಯ ನಂತರದ ಭಾರತವನ್ನು 65 ವರ್ಷಗಳ ಕಾಲ ಸಮರ್ಪಕ ಮತ್ತು ಸಮೃದ್ಧಿಯಿಂದ ಕಟ್ಟಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದು ಈಗ ಅರಿವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಆಡಳಿತ ಚುಕ್ಕಾಣಿ ಕಾಂಗ್ರೆಸ್ಗೆ ನೀಡಲಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಭಿಪ್ರಾಯಿಸಿದರು.
ಇಲ್ಲಿನ ನೂರಾನಿ ಪ್ಲಾಟ್ ಹಾಗೂ ಟೀಪುನಗರದ ಜಮಾತ್ ವತಿಯಿಂದ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟದ ಸಮಗ್ರ ಅಭಿವೃದ್ಧಿ, ಬಡವರ ಅಭ್ಯುದಯವು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ದ್ವೇಷ ಭಾಷಣ, ಧರ್ಮಗಳ ಮಧ್ಯೆ ಜಗಳ ಹಚ್ಚಿ ಕೇವಲ ಧರ್ಮದ ಆಧಾರದ ಮೇಲೆ ಸುಳ್ಳು ಅಭಿವೃದ್ಧಿ ಕಲ್ಪನೆಯನ್ನು ಜನರ ತಲೆಯಲ್ಲಿ ತುಂಬಿ ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆ ತಂದಿಲ್ಲ. ಹಿಂದೆ ಕಾಂಗ್ರೆಸ್ ಆಡಳಿತದ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿ ದುರಾಡಳಿತ ನಡೆಸುತ್ತಿದೆ. ಶ್ರೀಮಂತರ ಪರ ನಿಂತು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಪಾಲಿಕೆ ಸದಸ್ಯೆ ಮನ್ಸೂರಾ ಮುದಗಲ್, ಮುತವಲ್ಲಿಗಳಾದ ಅಬ್ದುಲ್ಖಾದರ್ ಬಡಿಗೇರ, ಮೊಹ್ಮದ್ಯುೂಸೂಬ್ ಹಾವೇರಿ, ಮೊಹ್ಮದ್ ಖಾಲಿದ್ ಖತೀಬ್, ಮೆಹಬೂಬ್ ನಾಲಬಂದ್, ಇತರರು ಇದ್ದರು.