ಐದು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಘೊಷಣೆ

saleem ahmad
Published on

ಹುಬ್ಬಳ್ಳಿ:ಲೋಕಸಭೆ ಚುನಾವಣೆ (2024)ಗೆ 5 ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಹೆಸರು ಘೊಷಣೆ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಓರ್ವ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರನ್ನು ವೀಕ್ಷಕರನ್ನಾಗಿ ಸದ್ಯದಲ್ಲೇ ನೇಮಕ ಮಾಡಲು ಅ. 2ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದ ಸಭೆಯಲ್ಲಿ ತೀರ್ವನಿಸಲಾಗಿದೆ. ನಿಗಮ-ಮಂಡಳಿಗಳಿಗೆ ನೇಮಕಾತಿಗೆ ಸೂತ್ರ ರಚಿಸಲಾಗಿದೆ. ಪ್ರತಿ ಜಿಲ್ಲೆಯಿಂದ ಪಟ್ಟಿ ತರಿಸಿ ಆಯ್ಕೆಯನ್ನು ಅಂತಿಮಗೊಳಿಸಲಾಗುವುದ ಎಂದರು.

ದೇಶದಲ್ಲಿ ‘ಇಂಡಿಯಾ’ ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲಿ 20 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಪಕ್ಷ ಆದೇಶ ಮಾಡಿದರೆ ನಾನು ಹಾವೇರಿಯಿಂದ ಸ್ಪರ್ಧಿಸಲು ಹಿಂಜರಿಯುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ತಿಂಗಳುಗಳ ಅವಧಿಯಲ್ಲಿಯೇ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿಗರು ಕಳೆದ 9 ವರ್ಷಗಳಲ್ಲಿ ಜನತೆಗೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಿ. ಸುಳ್ಳು ಹೇಳುವುದರಲ್ಲಿ ಆಸ್ಕರ್ ಪ್ರಶಸ್ತಿ ಇದ್ದಿದ್ದರೆ ಅದು ಪ್ರದಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಮನ್ ಕೀ ಬಾತ್ ಮೂಲಕ ದೇಶದ ಜನತೆಯನ್ನು ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಎಫ್.ಎಚ್. ಜಕ್ಕಪ್ಪನವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net