

ಹುಬ್ಬಳ್ಳಿ: ಪಂಚ ರಾಜ್ಯ ಹಾಗೂ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಅನೈತಿಕ ಮಾರ್ಗದಿಂದ ಸಾವಿರ ಕೋಟಿ ರೂ. ಸಂಗ್ರಹಕ್ಕೆ ತೀರ್ಮಾನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವಾರ ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆದಿದೆ. ಒಬ್ಬರ ಬಳಿ 42 ಕೋಟಿ ರೂ. ಹಾಗೂ ಇನ್ನೊಬ್ಬರ ಬಳಿ 45 ಕೋಟಿ ರೂ. ಪತ್ತೆಯಾಗಿದೆ. ಸಂತೋಷ ಅವರು ತಮ್ಮ ಬಳಿಯಿದ್ದ ಹಣ ಕಾಂಗ್ರೆಸ್ ಮುಖಂಡರದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಕಮಿಷನ್ ಸರ್ಕಾರ ಎಂದು ಆರೋಪಿಸಿದರು.
ಐಟಿ ದಾಳಿಯ ಬಳಿಕ ಕಾಂಗ್ರೆಸ್ನ ಕರಾಳ ಮುಖ ಹೊರಗೆ ಬಂದಿದೆ. ಇಲ್ಲಿಯವರೆಗೆ ಕಾಂಗ್ರೆಸ್ಸಿಗರು ಸತ್ಯ ಹರಿಶ್ಚಂದ್ರನಂತೆ ಪೋಸ್ ಕೊಡುತ್ತಿದ್ದರು. ಇದರಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಅನುಮಾನವಿದೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರು ಇದರಲ್ಲಿ ಇದ್ದಾರೆ. ಈ ಕುರಿತು ಸಿಬಿಐ, ಇಡಿ ಯಿಂದ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.
ಕತ್ತಲೆ ಗ್ಯಾರಂಟಿ
ರಾಜ್ಯ ಸರ್ಕಾರ ಅನಿಯಮಿತ ಲೋಡ್ ಶೆಡ್ಡಿಂಗ್ ಮೂಲಕ ರಾಜ್ಯದ ಜನತೆಗೆ ಕತ್ತಲೆ ಗ್ಯಾರಂಟಿ ಕರುಣಿಸಿದೆ. ಇವರು ಒಂದು ಕಡೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ವಿದ್ಯುತ್ ನಿಲುಗಡೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ವಿವಿಧ ಮೂಲಗಳಿಂದ 33,350 ಮೆಗಾವ್ಯಾಟ್ ವಿದ್ಯುತ್ ಲಭ್ಯವಿದೆ. ಗರಿಷ್ಠ ಬಳಕೆ ಸಮಯದಲ್ಲಿ 17000 ಮೆಗಾವ್ಯಾಟ್ ಅಗತ್ಯವಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.
ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲನ್ನು ಕೇಳಿದ್ದಕ್ಕಿಂತ ಹೆಚ್ಚಿಗೆ ನೀಡಿದ್ದೇವೆ. ಗಣಿ ಮತ್ತು ಕಲ್ಲಿದ್ದಲು ಇಲಾಖೆಗೆ 683 ಕೋಟಿ ರೂ. ಪಾವತಿಸುವುದು ಬಾಕಿ ಇದೆ. ಯಾವುದೇ ಯೋಚನೆ ಇಲ್ಲದೇ ಉಚಿತ ವಿದ್ಯುತ್ ನೀಡಿದರು. ಇದೀಗ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.