ತಪ್ಪು ದಾರಿಗೆ ಏಳೆಯುವ ಪ್ರಯತ್ನ ಮಾಡುತ್ತಿದೆ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಕಾಂಗ್ರೆಸ್ ಏನನ್ನು ಮಾಡಿಲ್ಲ. ಏನಾದರೂ ಒಳ್ಳೆಯದು ಆಗಿದ್ದರೆ ಅದು ಬಿಜೆಪಿ ಕಾಲದಲ್ಲಿ. ಇದೀಗ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಏಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ವನ್ಯಜೀವ ಮಂಡಳಿ ಸಭೆಗೆ ಟೈಗರ್ ಕಾರಿಡಾರ್ ಪ್ರಾಧಿಕಾರವು ಯಾವುದೇ ಟಿಪ್ಪಣಿಯನ್ನು ಕಳುಹಿಸಿರಲಿಲ್ಲ. ಹಾಗಾಗಿ ಮಂಡಳಿಯ ಸಭೆಯಲ್ಲಿ ಮಹದಾಯಿ ಯೋಜನೆಗೆ ಅನುಮತಿ ನೀಡುವ ವಿಷಯವನ್ನು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಹದಾಯಿ ವಿಷಯದಲ್ಲಿ ಟ್ರಿಬ್ಯುನಲ್ ರಚನೆ ಮಾಡಿ ವಿಳಂಬ ಮಾಡಿದ್ದು ಕಾಂಗ್ರೆಸ್. ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದೂ ಹನಿ ನೀರು ಕೊಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹದಾಯಿ ವಿಚಾರದಲ್ಲಿ ಬಹಳಷ್ಟು ಕೆಲಸಗಳು ಆಗಿವೆ. ಟ್ರಿಬ್ಯುನಲ್ ವರದಿ ಕೊಟ್ಟಿದ್ದು, ಅರಣ್ಯಕ್ಕೆ ಸಂಬಂಧಿಸಿದ ಅನುಮತಿ ನೀಡಿದ್ದು ಹಾಗೂ ಯೋಜನೆಯ ಕುರಿತು ಡಿಪಿಆರ್ ತಯಾರು ಮಾಡಿದ್ದು ನಾವು. ಬಿಜೆಪಿ ಕರ್ನಾಟಕದ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಗೋವಾದ ದಾಬೋಲ್ ವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿರುವುದರಿಂದ ಗೋವಾಕ್ಕೆ ಮಾತ್ರ ಅನುಕೂಲವಾಗುವುದಿಲ್ಲ. ದೇಶದ ಎಲ್ಲರಿಗೂ ಅನುಕೂಲವಾಗಲಿದೆ. ದಿನದ 24 ಗಂಟೆ ವಿದ್ಯುತ್ ಪೂರೈಕೆಗೆ ಪೂರಕವಾದ ಯೋಜನೆ ಇದು ಎಂದರು.

ಕಾಂಗ್ರೆಸ್ಸಿಗರು ಹೊರಗೆ ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಾರೆ. ಒಳಗೊಳಗೆ ಬೇರೆ ಇದೆ. ಮುಖ್ಯಮಂತ್ರಿಯಾಗಲು ತಾವು ರೆಡಿ ಇದ್ದೇವೆ ಎಂದು ಆರ್.ವಿ. ದೇಶಪಾಂಡೆ ಈಗಾಗಲೇ ಹೇಳಿದ್ದಾರೆ. ಡಾ. ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ್ ಮೊದಲಿನಿಂದಲೂ ಕಾಯುತ್ತಿದ್ದಾರೆ. ಎಂ.ಬಿ. ಪಾಟೀಲ ಹಾಗೂ ಸತೀಶ ಜಾರಕಿಹೊಳಿ ಕೆಲವೇ ದಿನಗಳಲ್ಲಿ ಪೋಸ್ಟರ್ ಅಂಟಿಸಲಿದ್ದಾರೆ. ಕಾಂಗ್ರೆಸ್ಸಿಗರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್ಸಿಗರು ನಮಗೆ, ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಸಲಹೆ ನೀಡುತ್ತಾರೆ. ನಾವು ದುಡ್ಡು ಕೊಡ್ರಪ್ಪಾ ಎಂದು ಕೇಳಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ರಸ್ತೆ ದುರಸ್ತಿಗೆ ಪಾಲಿಕೆಗೆ ಹಣ ಕೊಡುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದೆ. ಹಿಮಾಚಲಪ್ರದೇಶದಂತೆ ಕರ್ನಾಟಕದ ಸ್ಥಿತಿ ಆಗಲಿದೆ ಎಂದು ಟೀಕಿಸಿದರು.

ಪಡಿತರ ವ್ಯವಸ್ಥೆಯಡಿ ಬಡವರಿಗೆ ವಿತರಣೆಗೆ ಈಗ ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರದವರು ತೆಗೆದುಕೊಳ್ಳುತ್ತಿಲ್ಲ. ಸಚಿವ ಮುನಿಯಪ್ಪ ಅವರು ಬಂದು ಅಕ್ಕಿ ಕೊಡ್ತೀರಾ ಎಂದು ಕೇಳಿದ್ದರು. ನಾವು ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಲ ಎಂದು ಮುನಿಯಪ್ಪ ಹೇದ್ದಾರೆ. ಯಾಕೆ ಕೊಟ್ಟಿಲ್ಲ ಎಂಬುದನ್ನು ಅನರೇ ಹೇಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net