ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

20MDK04
Published on

ಮಡಿಕೇರಿ:

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಅಸಹಾಕಾರ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್‌ನ ಪ್ರಮುಖರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ತಟ್ಟೆ ಹಿಡಿದು ತಮ್ಮ ಪ್ರತಿಭಟನೆ ಸೂಚಿಸಿದರು. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ಹೇಳುವ ಮೂಲಕ ಬಡವರ ವಿರೋಧಿ ಧೋರಣೆ ಅನುಸರಿಸುತ್ತಿದೆ ಆದರೂ ೧೦ ಕೆ.ಜಿ. ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದೂ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಧರ್ಮಜ ಉತ್ತಪ್ಪ ಜುಲೈ ೧ರಿಂದ ಪ್ರತಿ ತಿಂಗಳೂ ೧೦ ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಇದಕ್ಕೂ ಮುನ್ನ ಕೇಂದ್ರ ಆಹಾರ ನಿಗಮ ಅಕ್ಕಿ ಪೂರೈಸಲು ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಏಕಾಏಕಿ ಅಕ್ಕಿ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಬಡವರ ಪರವಾದ ಮಹತ್ವಕಾಂಕ್ಷಿ ಯೋಜನೆಯನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ ಮಾತನಾಡಿ, ಕೇಂದ್ರ ಸರ್ಕಾರ ಅಕ್ಕಿಯ ವಿಷಯದಲ್ಲಿ ದಂದ್ವ ನಿಲುವು ತಳೆದಿದೆ. ಕೇಂದ್ರ ಆಹಾರ ನಿಗಮವು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂಬ ನೆಪ ಹೂಡಿ ೨,೪೦೦ ರೂ. ದರವನ್ನು ಪ್ರತಿ ಕ್ವಿಂಟಲ್‌ಗೆ ನಿಗದಿಪಡಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಯೇ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹಣ ಕೊಡುತ್ತೇವೆ ಕೊಡಿ ಎಂದರೂ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮನವಿ ಪತ್ರವನ್ನು ಅವರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪಾಲಿಕೆ ಸದಸ್ಯ ರಾಜೇಶ್ ಯಲಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಮುಖಂಡರಾದ ಲತೀಫ್, ನವೀನ್, ರಂಜಿ ಪೂಣಚ್ಚ, ಹಂಜ್ಹ, ಚುಮ್ಮಿ ದೇವಯ್ಯ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net