

ಮಡಿಕೇರಿ:
ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಅಡುಗೆ ಅನಿಲ ದರ, ದುಬಾರಿ ಆಗುತ್ತಿರುವ ದಿನ ಬಳಕೆ ವಸ್ತುಗಳ ಬೆಲೆಯಿಂದಾಗಿ ಜನ ಸಾಮಾನ್ಯರಿಗೆ ಬದುಕು ನಡೆಸಲು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಡಿಸಿಸಿ ಕಚೇರಿಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಇಂದಿರಾಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಏರುತ್ತಿರುವ ಬೆಲೆಗೆ ಕಡಿವಾಣ ಹಾಕುವುದಕ್ಕೆ ಸಂಬಂಧಿಸಿದಂತೆ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳುವುದರ ಮೂಲಕ ಜನ ಸಾಮಾನ್ಯರ ಬದುಕಿಗೆ ನೆರವಾಗಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಈ ವೇಳೆ ಮಾತನಾಡಿ, ಸರಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಎಲ್ಲ ಕಡೆಗಳಲ್ಲೂ ಪ್ರತಿಭಟನೆ ಮೂಲಕ ಬಿಜೆಪಿ ಸರಕಾರಕ್ಕೆ ಕಠಿಣ ಎಚ್ಚರಿಕೆ ನೀಡಲಾಗುತ್ತಿದೆ. ಬಡವರು, ಜನಸಾಮಾನ್ಯರ ಬಗ್ಗೆ ಸರಕಾರಕ್ಕೆ ನೈಜ ಕಾಳಜಿ, ಮಾನವೀಯತೆ ಇದ್ದರೆ ಕೂಡಲೇ ಅಡುಗೆ ಅನಿಲ ಬೆಲೆ ಇಳಿಸಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡಬೇಕು. ಇದು ಎಚ್ಚರಿಕೆಯ ಗಂಟೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮಾತನಾಡಿ, ಗ್ಯಾಸ್, ದಿನಸಿ ವಸ್ತುಗಳ ಬೆಲೆ ಏರಿಸುವ ಮೂಲಕ ಮಹಿಳೆಯರಿಗೆ ಬಿಜೆಪಿ ಸರಕಾರ ಅನ್ಯಾಯ ಮಾಡುತ್ತಿದೆ. ಹಾಗಾಗಿ ಹೋರಾಟದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲೂ ಇಂತಹ ಹೋರಾಟ ನಡೆಯಲಿದೆ. ಕೊಡಗಿನವರು ಸ್ವಾಭಿಮಾನಿಗಳಾಗಿದ್ದು, ಸ್ವಾಭಿಮಾನಕ್ಕೆ ಅಡ್ಡಿಯಾದರೆ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಯಿಂದಾಗಿ ಜೀವನ ಸಾಗಿಸಲು ಕಷ್ಟ ಆಗುತ್ತಿದೆ. ಅಡುಗೆ ಅನಿಲ ದರ ದುಬಾರಿ ಆಗಿದೆ. ಹಾಗಾಗಿ ಕಟ್ಟಿಗೆ ಬಳಸುವ ಅನಿವಾರ್ಯತೆ ಎದುರಾಗಿದ್ದು, ಮತ್ತೆ ಹಿಂದಿನ ಕಾಲಕ್ಕೆ ಹೋಗುವಂತಾಗಿದೆ. ದೇಶ ಅಭಿವೃದ್ಧಿ ಆಗುತ್ತಿದೆ ಎಂದು ಸುಳ್ಳು ಹೇಳುತ್ತಿರುವ ಬಿಜೆಪಿ ಗತಕಾಲಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಟಿ.ಪಿ. ರಮೇಶ್, ವಿ.ಪಿ. ಶಶಿಧರ್, ರಾಜೇಶ್ ಯಲ್ಲಪ್ಪ, ತೆನ್ನೀರ ಮೈನಾ, ಮಿನಾಜ್ ಪ್ರವೀಣ್, ಚುಮ್ಮಿ ದೇವಯ್ಯ, ಕೂಡಿಗೆ ಅಣ್ಣಯ್ಯ, ಫಿಲೋಮಿನಾ, ವಿವಿಧ ಮುಂಚೂಣಿ ಘಟಕಗಳ ಪ್ರಮುಖರು ಮತ್ತಿತರರಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.