ಕೇಂದ್ರ ಸರ್ಕಾರದ ವಿರುದ್ಧವೇ ಬಿಜೆಪಿ ಪ್ರತಿಭಟಿಸಲಿ

cong press meet
Published on

ಮಡಿಕೇರಿ:

ರಾಜ್ಯ ಸರ್ಕಾರದ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿ ಜನಾಕ್ರೋಶ ರ‍್ಯಾಲಿ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಪ್ರಶ್ನಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ದೇಶದ ಮಧ್ಯಮ ವರ್ಗ ಮತ್ತು ಬಡ ಜನರ ವಿರೋಧಿ ಆಗಿದೆ. ಗ್ಯಾಸ್ ಸಬ್ಸಿಡಿ ತೆಗೆದು ಬಡವರಿಗೆ ಅನ್ಯಾಯ ಮಾಡಿದೆ. ಔಷಧ, ಗೊಬ್ಬರ, ಡೀಸೆಲ್, ಪೆಟ್ರೋಲ್ ಸೇರಿ ಎಲ್ಲದಕ್ಕೂ ಬೆಲೆ ಏರಿಕೆ ಮಾಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ರಾಜ್ಯ ಬಿಜೆಪಿ ಹೋರಾಟ ಮಾಡಲಿ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಸಾರಿಗೆ ವೆಚ್ಚ, ವಿದ್ಯುತ್ ದರ, ಕೃಷಿ ವೆಚ್ಚ, ತರಕಾರಿ, ದಿನಸಿ ಬೆಲೆ, ಸಿಮೆಂಟ್, ಕಬ್ಬಿಣ ದರ ವಿಪರೀತ ಏರಿಕೆ ಆಗಿದೆ. ಹಾಗಾಗಿ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಬಡವರ ಪರವಾಗಿ ಇರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುವ ಬದಲು ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವಿರುದ್ಧ ಹೋರಾಟ ಮಾಡಲಿ ಎಂದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯಾವ ಮುಖ ಇಟ್ಟುಕೊಂಡು ಮಾತನಾಡುತ್ತಿದೆ ? ರಾಜ್ಯ ಸರ್ಕಾರ ಹಾಲಿನ ದರ ಲೀಟರ್‌ಗೆ 4 ರೂ ಹೆಚ್ಚಿಸಿದ್ದರೂ ನೇರವಾಗಿ ರೈತರಿಗೆ ಕೊಡಲಾಗುತ್ತಿದೆ. ರಾಕೀಯ ಎಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಬದ್ಧತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸಬೇಕು ಎಂದು ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಾತನಾಡಿ, ಬಿಜೆಪಿಯ ಜನಾಕ್ರೋಶ ಯಾತ್ರೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನಡೆಯಬೇಕೇ ಹೊರತೂ ಗ್ಯಾರಂಟಿ ಯೋಜನೆ ಕೊಟ್ಟ ಕಾಂಗ್ರೆಸ್ ವಿರುದ್ಧ ಅಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಕಚ್ಛಾ ತೈಲ ಬೆಲೆ ಹೆಚ್ಚು ಇದ್ದರೂ ಡೀಸೆಲ್, ಪೆಟ್ರೋಲ್ ಬೆಲೆ ಲೀ.ಗೆ 50-60 ರೂ. ಇತ್ತು. ಈಗ ಕಚ್ಛಾ ತೈಲ ಬೆಲೆ ಕಡಿಮೆ ಇದೆ. ಆದರೂ ಡೀಸೆಲ್, ಪೆಟ್ರೋಲ್ ಬೆಲೆ ದುಪ್ಪಟ್ಟಾಗಿದೆ ಎಂದರು.

ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಿರಂಜೀವಿ ಹಾಗೂ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುತ್ತಣ್ಣ ಕೊಣಿಯಂಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net