

ಮಡಿಕೇರಿ:
ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ ಅರಿಯಲು ಸಮೀಕ್ಷೆ ನಡೆಯುತ್ತಿದೆಯೇ ಹೊರತು ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೊಸರಾಜು ಸ್ಪಷ್ಟಪಡಿಸಿದ್ದಾರೆ. ಇಲ್ಲಿಯ ಬಾಲಭವನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂತರಾಜ್ ವರದಿ ಸಲ್ಲಿಕೆ ಆಗಿ 10 ವರ್ಷ ಪೂರ್ಣಗೊಂಡಿದೆ. ಆಗ ಕರ್ನಾಟಕದ ಜನಸಂಖ್ಯೆ 6 ಕೋಟಿ ಇತ್ತು. ಈಗ ನಮ್ಮ ಜನಸಂಖ್ಯೆ 7 ಕೋಟಿ ಆಗಿದೆ. ಆಗಿನ ಸಾಮಾಜಿಕ ಸ್ಥಿತಿಗತಿಗೂ ಈಗಿನದ್ದಕ್ಕೂ ವ್ಯತ್ಯಾಸ ಇದೆ. ಇವುಗಳನ್ನು ಗುರುತಿಸುವ ಮೂಲಕ ರಾಜ್ಯದ ಅಭಿವೃದ್ಧಿ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ. 50ಕ್ಕೂ ಅಧಿಕ ಹಿಂದುಳಿದ ವರ್ಗದವರು ಇದ್ದಾರೆ. ಇವರನ್ನೆಲ್ಲಾ ಹಲವು ರೀತಿಯಲ್ಲಿ ಶೋಷಣೆ ಮಾಡಲಾಗುತ್ತಿದೆ. ಇದನ್ನು ಗುರುತಿಸಿ ಸರಿಪಡಿಸಲು ಕೂಡ ಸಮೀಕ್ಷೆ ಮಾಡಲಾಗುತ್ತಿದೆ. ಈ ಸಮೀಕ್ಷೆಗೆ ಹಿಂದುಳಿದ ವರ್ಗದವರು ಬೆಂಬಲ ಕೊಡಬೇಕು. ಸಮೀಕ್ಷೆ ಸಂದರ್ಭ ಕೇಳಲಾಗುವ 60 ಪ್ರಶ್ನೆಗಳಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತರಿಸಬೇಕು. ಸಣ್ಣ ಸಣ್ಣ ಜಾತಿಗಳನ್ನೂ ಗುರುತಿಸುವ ಕೆಲಸ ಈ ಸಮೀಕ್ಷೆಯಿಂದ ಆಗುತ್ತಿದೆ. ಅದರೆ ಸಮೀಕ್ಷೆ ವಿಷಯದಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಜಾತ್ಯತೀತ, ವರ್ಗಾತೀತ ಸಮಾಜ ನಿರ್ಮಾಣ ಸರ್ಕಾರದ ಆದ್ಯತೆ ಆಗಿದೆ. ಈ ಹಿನ್ನೆಲೆಯಲ್ಲಿ ಶೋಷಣೆಗೆ ಒಳಗಾದವರನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಇಂಥ ಸಮೀಕ್ಷೆಯನ್ನು ವಿರೋಧ ಮಾಡುವವರು ಸಂವಿಧಾನ ವಿರೋಧಿಗಳು. ಇಲ್ಲಿಯ ತನಕ ಜನರಲ್ಲಿ ಗೊಂದಲ ಮೂಡಿಸಿ, ದಾರಿ ತಪ್ಪಿಸದವರು ಸಮೀಕ್ಷೆಗೆ ವಿರೋಧ ಮಾಡುತ್ತಿದ್ದಾರೆ.
ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ. ಸಮೀಕ್ಷಾದಾರರಿಗೆ ಈಗಾಗಲೇ ಈ ಬಗ್ಗೆ ಕೈಪಿಡಿ ಕೊಡಲಾಗಿದೆ. ಸಮೀಕ್ಷೆ ನಡೆಸುವುದು ಹೇಗೆ ಎನ್ನುವುದರ ಮಾಹಿತಿ ಇದರಲ್ಲಿದೆ. ಸಮೀಕ್ಷೆ ಮಾಡುವ ಸಂದರ್ಭ ದಾಖಲೆಯ ಉದ್ದೇಶಕ್ಕೆ ಜಾತಿ, ಧರ್ಮ ನಮೂದು ಮಾಡಲಾಗುತ್ತದೆ. ಆದರೆ ಧರ್ಮ ಒಡೆಯಲು ಹೊರಟಿದ್ದಾರೆ, ಹೊಸ ಜಾತಿ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಆರೋಪ ಮಾಡುತ್ತಿವೆ. ಗೊಂದಲ ಸೃಷ್ಟಿಸುವುದೇ ಇವರ ಕೆಲಸ. ಜಾತಿ, ಧರ್ಮ ನಮ್ಮ ಸ್ವಾತಂತ್ರ‍್ಯಕ್ಕೆ ಬಿಟ್ಟಿದ್ದು. ಇದು ಜಾತಿ ಆಧಾರಿತ ಸಮೀಕ್ಷೆ ಅಲ್ಲ. ಸಾಮಾಜಿಕ ವರ್ಗೀಕರಣಕ್ಕೋಸ್ಕರ ನಡೆಸಲಾಗುತ್ತಿರುವ ಸಮೀಕ್ಷೆ.
ಅಸ್ಪೃಶ್ಯತೆ, ಜಾತಿವಾದದಿಂದ ನೊಂದಿರುವವರು, ಎಸ್‌ಟಿ, ಹಿಂದುಳಿದ ವರ್ಗ ಗುರುತಿಸುವಲ್ಲಿ ಈ ಸಮೀಕ್ಷೆ ಮಹತ್ವದ್ದಾಗಿದೆ. ಅಪಪ್ರಚಾರದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ಸಮೀಕ್ಷೆ ವೈಜ್ಞಾನಿಕವಾಗಿ ನಡೆಯುತ್ತಿದೆ. ಈ ಮೂಲಕ ಹಿಂದುಳಿದ ವರ್ಗದವರನ್ನು ಒಗ್ಗೂಡಿಸಲಾಗುತ್ತಿದೆ ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಾಂಗ್ರೆಸ್‌ನಲ್ಲಿ ಎಲ್ಲಾ ಘಟಕಗಳನ್ನು ಒಟ್ಟು ಸೇರಿಸಿಕೊಂಡು ಕೆಲಸ ಮಾಡಬೇಕು. ಪಕ್ಷದ ಒಬಿಸಿ ಘಟಕಗಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಪಕ್ಷ ಕಟ್ಟಲು ಎಲ್ಲರೂ ತಂಡವಾಗಿ ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಎಲ್ಲರ ಶ್ರಮವೂ ಮುಖ್ಯ. ರಸ್ತೆ ದುರಸ್ತಿಗೆ ಹಣ ಇದೆ. ಮಳೆಯ ಕಾರಣಕ್ಕೆ ಕೆಲಸ ಮಾಡಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆ ಬಂದ ಮಾತ್ರಕ್ಕೆ ಅಭಿವೃದ್ಧಿಗೆ ಕೊರತೆ ಆಗುವುದಿಲ್ಲ ಎಂದರು.
ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಮಾತನಾಡಿದರು. ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಬಾನಂಡ ಪೃಥ್ವಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಜಮ್ಮಡ ಸೋಮಣ್ಣ, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು, ಪಕ್ಷದ ವಕ್ತಾರ ತೆನ್ನೀರಾ ಮೈನಾ ವೇದಿಕೆಯಲ್ಲಿ ಇದ್ದರು.