

ಮಡಿಕೇರಿ:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು. ಮಡಿಕೇರಿ ಕಾವೇರಿ ಹಾಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಕಾರ್ಯಕರ್ತರಿಗೆ ಬೃಹತ್ ಅಭಿನಂದನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಧಿಕಾರಕ್ಕೆ ಬರುವ ಮುನ್ನ 100 ದಿನಗಳಲ್ಲಿ ಕಪ್ಪುಹಣ ಮರಳಿ ತರುವುದು. ಯುವಸಮುದಾಯಕ್ಕೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಮೂಲಕ ಬಡವರ ಬದುಕನ್ನು ದುಸ್ತರಗೊಳಿಸಿದೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವ ಜನರಿಗೆ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ದೇಶದ ಯಾವುದೇ ಸರ್ಕಾರ ನೀಡದಂಥ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
138 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ರಾಜ್ಯವನ್ನು ಸರ್ವಜನಾಂಗದ ಶಾಂತಿ ತೋಟವನ್ನಾಗಿಸುವುದು ಕಾಂಗ್ರೆಸ್ ಸಂಕಲ್ಪ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಾಂಗ್ರೆಸ್ ಪಕ್ಷದ ಕರ್ತವ್ಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ಅಲ್ಪಸಂಖ್ಯಾತರು ಎಂದರೆ ಎಲ್ಲ ಸಮಾಜದವರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಜಾತ್ಯತೀತ ಪಕ್ಷಗಳನ್ನು ಗೆಲ್ಲಿಸಿದರೆ ಮಾತ್ರ ಸಂವಿಧಾನ ಉಳಿಯುತ್ತದೆ. ನಮಗೆ ಆ ಸ್ಥಾನ ಸಿಕ್ಕಿಲ್ಲ ಈ ಸ್ಥಾನ ಸಿಕ್ಕಿಲ್ಲ ಎಂಬ ಸಣ್ಣಪುಟ್ಟ ಅಸಮಾಧಾನವನ್ನು ಬಿಡಬೇಕು. ಸಂಸತ್ ಚುನಾವಣೆಯಲ್ಲಿಯೂ ಬಿಜೆಪಿಯನ್ನು ತೊಲಗಿಸಬೇಕು. ಯಾವುದೇ ಊರಲ್ಲಿ ಗಲಾಟೆ ಆದರೆ ಅದು ಅ ಊರಿನ ನೆಮ್ಮದಿಗೆ ಭಂಗ. ಯಾರ ಮಾತನ್ನೂ ಕೇಳದೇ ಮುಂದಿನ ಚುನಾವಣೆಯಲ್ಲಿ ಸಂಸತ್ ಸದಸ್ಯ ಸ್ಥಾನ ಗೆಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ಹನೀಫ್ ಅಧಿಕಾರ ಸ್ವೀಕರಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಬೆಂಗಳೂರು ಶಾಂತಿನಗರÀ ಶಾಸಕ ಎನ್.ಎ. ಹ್ಯಾರಿಸ್, ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಮಾಜಿ ಎಂಎಲ್.ಸಿ ಅರುಣ್ ಮಾಚಯ್ಯ, ಮುಖಂಡರಾದ ಟಿ.ಪಿ.ರಮೇಶ್, ಮಾಜಿ ಶಾಸಕ ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್ ಪ್ರಮುಖರು, ವಿವಿಧ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಸಮಿತಿ ಸದಸ್ಯರು, ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಉಪಸ್ಥಿತರಿದ್ದರು.