

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿರುವ ಸಂದರ್ಭದಲ್ಲಿ 31 ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿ ಹಿಂದು ಪರ ಹೋರಾಟಗಾರ ಹುಬ್ಬಳ್ಳಿಯ ಶ್ರೀಕಾಂತ ಪೂಜಾರ ಅವರನ್ನು ಬಂಧಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಕುಹಕತನ ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮಗೇಕೆ ಶ್ರೀ ರಾಮ ಮಂದಿರ ಉದ್ಘಾಟನೆ ಬಗ್ಗೆ ದುಃಖ, ಬೇಸರ, ಹೊಟ್ಟೆಕಿಚ್ಚು ? ಮುಸ್ಲಿಮರ ಮೇಲೆ ಪ್ರೀತಿ-ಶ್ರೀ ರಾಮ ಮಂದಿರದ ಮೇಲೆ ದ್ವೇಷ ಏಕೆ ? ಶ್ರೀ ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯವರೇ ನಿಮ್ಮ ಪಕ್ಷದಲ್ಲಿ ಕಳ್ಳರá--ಕಾಕರು ಇದ್ದಾರೆ. ಅವರನ್ನು ಹುಡುಕಿ ಒಳಗೆ ಹಾಕಿ. ಕೆಜಿ ಹಳ್ಳಿ, ಡಿಜೆ ಹಳ್ಳಿ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತೀರಿ. ಹಿಂದು ಪರ ಹೋರಾಟಗಾರರನ್ನು ಅನವಶ್ಯಕವಾಗಿ ಬಂಧಿಸುತ್ತಿದ್ದೀರಿ. ಇದು ತುಷ್ಟೀಕರಣದ ಪರಾಕಾಷ್ಠೆ. ಇದರಿಂದ ಸಮಾಜದಲ್ಲಿ ದ್ವೇಷ, ಅಸೂಯೆ ಉಂಟಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.
ನಾವು ಅಧಿಕಾರದಲ್ಲಿದ್ದಾಗ ಬಹಳಷ್ಟು ಹಿಂದು ಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ. ಈ ಪ್ರಕರಣಗಳಲ್ಲಿ ಜಾಮೀನು ಕೊಡಿಸಲು, ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಪಕ್ಷದಿಂದಲೇ ವಕೀಲರನ್ನು ಇಟ್ಟೀದ್ದೇವೆ. ಶ್ರೀಕಾಂತ ಪೂಜಾರ ಪ್ರಕರಣ ನಮ್ಮ ಗಮನದಲ್ಲಿ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಗೆ ಆಹ್ವಾನ ನೀಡಿದ್ದೇವೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ. ಹಾಗಾಗಿ, ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.