ಕಾಂಗ್ರೆಸ್​ನ ಬ್ಲ್ಯಾಕ್​ವೆುೕಲ್ ತಂತ್ರ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹಳೇ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಲ್ಯಾಕ್​ವೆುೕಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ನೀವು ಬಿಟ್ಟುಬಿಡ್ರಿ, ಇಲ್ಲವಾದರೆ ನಿಮ್ಮ ಮೇಲೆ ಸೇಡಿನ ರಾಜಕಾರಣ ಮಾಡಲು ಸಿದ್ಧರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂಬುದು ಕಾಂಗ್ರೆಸ್​ನ ಥಿಯರಿ ಆಗಿದೆ. ಇದು ಭ್ರಷ್ಟಾಚಾರದಿಂದ ಸ್ವಯಂ ರಕ್ಷಣೆ ಪಡೆಯುವ ಪ್ರಯತ್ನವಾಗಿದೆ ಎಂದರು.

ಕುಮಾರಸ್ವಾಮಿ ವಿರುದ್ಧ ಇರುವ ಗಣಿ ಪರವಾನಗಿ ಪ್ರಕರಣ 2004ರದ್ದು. 2013ರಿಂದ 18ರವರೆಗೆ ಹಾಗೂ ಈಗ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ತನಿಖೆ ಮಾಡಲು ಬೇಡ ಎಂದು ಹೇಳಿದವರು ಯಾರು? 2018ಲ್ಲಿ ಬಹುಮತ ಇಲ್ಲದಿದ್ದರೂ ಕುಮಾರಸ್ವಾಮಿ ಮನೆಗೆ ಜೆಡಿಎಸ್ ಜತೆ ಕೈ ಜೋಡಿಸಿ ಮೈತ್ತಿ ಸರ್ಕಾರ ಮಾಡಿದ್ದವರು ಇವರೇ. ಆಗ ಸುಮ್ಮನೆ ಇದ್ದಿದ್ದು ಯಾಕೆ ? ತಮಗೆ ಬೇಕಾದಾಗ ಏನೇ ಆದರೂ ಸರಿ, ಬೇಡವಾದಾಗ ತಪ್ಪು ಎಂಬುದು ಯಾವ ನೀತಿ. ಈಗಲೂ ನಾನು, ಆರ್. ಅಶೋಕ, ಬಿ.ವೈ. ವಿಜಯೇಂದ್ರ ತನಿಖೆ ಮಾಡಿ ಎಂದು ಹೇಳಿದ್ದೇವೆ. ಕುಮಾರಸ್ವಾಮಿ ಸಹ ಹೇಳಿದ್ದಾರೆ ಎಂದು ಹೇಳಿದರು.

ತಾನು ಹಿಂದುಳಿದವ ಎಂಬ ಕಾರಣಕ್ಕೆ ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಿಡದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ದೇವರಾಜ ಅರಸರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದು ಕಾಂಗ್ರೆಸ್ ಪಕ್ಷ. ಅನಾರೋಗ್ಯದಲ್ಲಿದ್ದರೂ ವೀರೇಂದ್ರ ಪಾಟೀಲರಿಗೆ ವಿಮಾನ ನಿಲ್ದಾಣದಲ್ಲಿಯೇ ನಾಳೆಯಿಂದ ಬೇರೆ ಸಿಎಂ ನೋಡುತ್ತೇವೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರೇ ನಿಮ್ಮ ಬೆನ್ನು ಹೇಗಿದೆ ಎಂದು ಬೇರೆಯವರಿಂದ ಕೇಳಿ ತಿಳಿದುಕೊಳ್ಳಿ. ನಿಮ್ಮ ಬೆನ್ನು ನಿಮಗೆ ಕಾಣಿಸುವುದಿಲ್ಲ ಎಂದು ತಿವಿದರು.

ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸ ಕಾಂಗ್ರೆಸ್​ನಿಂದ ಆಗಿದೆ, ಬಿಜೆಪಿಯಿಂದ ಅಲ್ಲ. ಕಾಂಗ್ರೆಸ್ ಏನೇ ಹೇಳಲಿ, ಕುಮಾರಸ್ವಾಮಿ ಅವರು ಎನ್​ಡಿಎ ಭಾಗವಾಗಿದ್ದಾರೆ. ಎನ್​ಡಿಎನಲ್ಲಿ ಇರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net