

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅತ್ಯಾಚಾರ, ಸರಣಿ ಕೊಲೆಗಳು ಲಂಗೂ ಲಗಾಮು ಇಲ್ಲದೇ ನಿರಂತರವಾಗಿ ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುಲು ಕಾಲಹರಣ ಮಾಡುತ್ತಿದ್ದಾರೆ. ಸಂಪುಟವು ಇದಕ್ಕೆ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿದೆ.ಇವರಿಗೆ ರಾಜ್ಯದ ಜನತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದ ಅತ್ಯಾಚಾರ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಹಿಂದುಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು ಸರ್ಕಾರವು ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ರಾಜ್ಯಪಾಲರ ವಿರುದ್ಧ ಪಕ್ಷದ ಶಾಸಕರು, ಮುಖಂಡರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಸಂವಿಧಾನ ಪ್ರಕಾರ ಅವರು ಅವರ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.