

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕದಲ್ಲಿ ತುಷ್ಟಿಕರಣದ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ. ಕಾಂಗ್ರೆಸ್ ಅಧಿಕಾರವಿರುವ ಎಲ್ಲೆಡೆ ಮತಾಂಧ ಶಕ್ತಿಗಳು ಹಾಗೂ ದೇಶದ್ರೋಹಿಗಳಿಗೆ ವಿಶೇಷ ಶಕ್ತಿ ಬರುತ್ತದೆ. ಇದಕ್ಕೆ ಕಾಂಗ್ರೆಸ್ನ ಧೋರಣೆಯೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನಮಂಗಲ, ಕೊಪ್ಪಳ ಘಟನೆಯನ್ನು ಪೊಲೀಸರು ಸರಿಯಾಗಿ ನಿರ್ವಹಿಸಿಲ್ಲ. ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬಾರದು ಎಂದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ತಾವೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ. ಹಾಗಾಗಿ ಶತಾಯ-ಗತಾಯ ಕೇಂದ್ರ ಸರ್ಕಾರದ ಎಲ್ಲ ನಿರ್ಣಯಗಳನ್ನು ವಿರೋಧಿಸುತ್ತ ಬರುತ್ತಿದ್ದಾರೆ. ಮುಂದೆಯೂ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಹತಾಶೆಯಲ್ಲಿ ಕಾಂಗ್ರೆಸ್ ಒಂದು ದೇಶ-ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಬೆಂಗಳೂರು ಮಾತ್ರವಲ್ಲ, ದೇಶಾದ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಬೆಲೆ ನಿಯಂತ್ರಣ ಕುರಿತು ದೇಶಾದ್ಯಂತ 570 ಕಡೆ ಮಾನಿಟರಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು.