ಕುಶಾಲನಗರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

cong
Published on

ಕುಶಾಲನಗರ:

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಮಂಗಳವಾರ ಸಂಜೆ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಿಂದ ಪಕ್ಷದ ಕಾರ್ಯಕರ್ತರು ಬಾವುಟ ಹಿಡಿದು ಬಿ.ಎಂ. ರಸ್ತೆಯ ಮೂಲಕ ಕಾರ್ಯಪ್ಪ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಬಿಜೆಪಿ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಬಿಜೆಪಿ ಮುಖಂಡರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಬಿಜೆಪಿಗರ ಮನೆದೇವರೇ ಸುಳ್ಳು. ಸಾವಿನ ರಾಜಕಾರಣ ಮಾಡುವ ಕೀಳುಮಟ್ಟದ ರಾಜಕೀಯ ಪ್ರಪಂಚದಲ್ಲಿ ಇದ್ದರೆ ಅದು ಬಿಜೆಪಿ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಜನರನ್ನು ಸಾಯಿಸಿ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಬಿಜೆಪಿಗರು ಹೆಣದ ಮುಂದೆ ರಾಜಕೀಯ ಮಾಡುವ ಕೆಟ್ಟ ಹವ್ಯಾಸ ಬಿಡಬೇಕು. ಕೇವಲ ಜಾತಿ, ಧರ್ಮ ನಡುವೆ ಕಂದಕ ಸೃಷ್ಟಿಸಿ ಲಾಭ ಮಾಡಿಕೊಳ್ಳುವ ಕುತಂತ್ರ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಪ್ರತಾಪ್ ಸಿಂಹ ಈಗ ಯಾವ ಪಕ್ಷದಲ್ಲಿ ಇದ್ದರೆ ಅಂತ ಗೊತ್ತಿಲ್ಲ. ಅವರು ಯೋಗ್ಯ ಅಲ್ಲ ಎಂದು ಬಿಜೆಪಿ ಟಿಕೆಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಈಗ ಯತ್ನಾಳ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ದ್ವೇಷ ರಾಜಕಾರಣ, ಸಾವಿನ ಮನೆಯಲ್ಲಿ ರಾಜಕಾರಣವನ್ನು ಕಾಂಗ್ರೆಸ್ ಯಾವತ್ತು ಮಾಡುವುದಿಲ್ಲ.ಬಿಜೆಪಿಯ ಈ ಆಟ ಹೆಚ್ಚು ದಿನ ನಡೆಯೋದಿಲ್ಲ. ನಿಮ್ಮ ಕನಸು ಭಗ್ನವಾಗುತ್ತದೆ ಎಂದರು.

ಡಿಸಿಸಿ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಇಂತಹ ಘಟನೆ ನಡೆಯಬಾರದು ಎಂದು ಪ್ರಾರ್ಥಿಸೋಣ. ಈ ಸಾವಿನಲ್ಲಿ ಬಿಜೆಪಿ ಹುನ್ನಾರ ಅಡಗಿದೆ. ಮತ ಕೇಂದ್ರೀಕರಣ ಮಾಡಲು ಯತ್ನಿಸುತ್ತಿದ್ದಾರೆ. ಧರ್ಮ, ಜಾತಿ ಹೆಸರನ್ನು ಹುಟ್ಟು ಹಾಕಿ ಬೆಂಕಿ ಹಚ್ಚುವ ಕೆಲಸ ಬಿಜೆಪಿಗರಿಂದ ನಡೆಯುತ್ತಿದೆ.ವಿನಯ್ ಸಾವಿಗೆ ಬಿಜೆಪಿಯವರ ಪ್ರೇರಣೆಯೇ ಕಾರಣ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಎಚ್.ಕೆ. ನಟೇಶ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಜೆ. ಫಿಲೋಮಿನಾ, ಜಿಲ್ಲಾ ಭರವಸೆ ಸಮಿತಿ ಸದಸ್ಯೆ ಸುನೀತಾ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಭೂ ನ್ಯಾಯ ಮಂಡಳಿ ಅಧ್ಯಕ್ಷ ಗೋವಿಂದಪ್ಪ, ಪುರಸಭೆ ಸದಸ್ಯರಾದ ನವೀನ್, ಶಿವಶಂಕರ್, ಪ್ರಕಾಶ್, ಮುಖಂಡರಾದ ಎಸ್.ಎಸ್.ಚಂದ್ರಶೇಖರ್, ರಮೇಶ್, ಟಿ.ಬಿ. ಜಗದೀಶ್, ಕೆ.ಎಸ್. ಕೃಷ್ಣೇಗೌಡ, ಎಚ್.ಟಿ. ದಿನೇಶ್, ರವೀಂದ್ರನಾಥ್, ಟಿ.ಪಿ. ಹಮೀದ್, ಬಿ.ಡಿ.ಅಣ್ಣಯ್ಯ, ಗೀತಾ,ಪುಷ್ಪಲತಾ, ರುಬೀಯಾ ಮತ್ತಿತರರು ಇದ್ದರು.

ಇದಕ್ಕೂ ಮೊದಲು ವಿನಯ್ ಸೋಮಯ್ಯ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net