ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರಗೆ ಗೆಲುವು ; ಸಚಿವದ್ವಯರಿದ್ದ ಕ್ಷೇತ್ರದಲ್ಲೇ ಬಿಜೆಪಿಗೆ ಸೋಲು

DSC_7092
Published on

ತುಮಕೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ‘ಪ್ರಾಶಸ್ತ್ಯ’ ಗೆಲುವಿನ ನಗೆಬೀರಿದರು. ಅತೀರಥಮಹಾರಥ ಸಚಿವದ್ವಯರನ್ನೇ ಹೊಂದಿದ್ದ ಬಿಜೆಪಿ ಅಭ್ಯರ್ಥಿ ಲೋಕೇಶ್‌ಗೌಡ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಸರ್ಕಾರಿ ಹುದ್ದೆ ಬಿಟ್ಟು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನಿಲ್‌ಕುಮಾರ್ ಕೆಟ್ಟರು. ಜಿಲ್ಲೆಯಲ್ಲಿ ಗೆಲುವು ಪಡೆದ ಕಾಂಗ್ರೆಸ್ 18 ವರ್ಷದ ನಂತರ ಪರಿಷತ್ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯಿತು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮುನ್ನಡೆ ಕಾಯ್ದುಕೊಂಡರು. ಬಿಜೆಪಿ ಅಭ್ಯರ್ಥಿ ಹಿಂಬಾಲಿಸಿದಷ್ಟೇ, ಪೈಪೋಟಿ ನೀಡಲಿಲ್ಲ, ಸತತ ಎರಡು ಬಾರಿ ಗೆದ್ದು ಬೀಗಿದ್ದ ಜೆಡಿಎಸ್ ಪರವಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿ ಅನಿಲ್‌ಕುಮಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದರು.

ಇನ್ನುಳಿದಂತೆ ಪ್ರಚಾರದಲ್ಲಿ ಮಂಚೂಣಿಯಲ್ಲಿದ್ದ ಪಕ್ಷೇತರ ಅಭ್ಯರ್ಥಿ ನಿವೃತ್ತ ಇಂಜಿನಿಯರ್ ಜಯರಾಮಯ್ಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ 5 ಮತ ಪಡೆದರೆ, ಆರ್.ಎ.ಪ್ರಕಾಶ್‌ಗೆ 6 ಮತ ಬಿದ್ದಿದ್ದವು, ಎಎಪಿ ಬೆಂಬಲಿತ ಅಭ್ಯರ್ಥಿ ಗಜೇಂದ್ರಕುಮಾರ್ 6 ಮತ ಪಡೆದರು. ಗೆಲುವಿಗೆ ಶೇ.50 +1 ಮತಗಳನ್ನು ಪಡೆಯಬೇಕಿದ್ದು ಆರ್.ರಾಜೇಂದ್ರಗೆ ಮ್ಯಾಜಿಕ್ ನಂಬರ್ 2661 ತಲುಪಲು 411 ಮತಗಳ ಕೊರತೆ ಬಿತ್ತು, ಈ ಸಂದರ್ಭದಲ್ಲಿ ಕಣದಲ್ಲಿದ್ದವರ ಪೈಕಿ ಕನಿಷ್ಠ ಮತ ಪಡೆದ ಅಭ್ಯರ್ಥಿಯ 2ನೇ ಪ್ರಾಶಸ್ತ್ಯ ಮತವನ್ನು ಅಭ್ಯರ್ಥಿಗಳಿಗೆ ಹಂಚಲಾಯಿತು. ಎಲಿಮಿನೇಷನ್ ಸುತ್ತಿನಲ್ಲಿ 474 ಮತ ಪಡೆದ ಆರ್.ರಾಜೇಂದ್ರ ಬರೋಬ್ಬರಿ 1085 ಮತಗಳ ಅಂತರದಿಂದ ಗೆದ್ದು ಬೀಗಿದರು.

ಗೆಲುವು ಖಚಿತವಾದೊಡನೆ ಮತ ಎಣಿಕೆ ಕೇಂದ್ರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಜತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೂಡ ಕಾಣಿಸಿಕೊಂಡರು. ಪ್ರಮಾಣಪತ್ರ ನೀಡುವುದು ತಡವಾಗಲಿದ್ದ ಹಿನ್ನೆಲೆಯಲ್ಲಿ ಮತ ಕೇಂದ್ರದ ಮುಂಭಾಗ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಭಾಗಿಯಾದರು.

ತೆರೆದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ, ಕೆ.ಎನ್.ರಾಜಣ್ಣ, ಷಫಿಅಹ್ಮದ್, ಕೊಟ್ಟ ಶಂಕರ್, ಕೊಂಡವಾಡಿ ಚಂದ್ರಶೇಖರ್, ಶಶಿಹುಲಿಕುಂಟೆ, ಚಂದ್ರಶೇಖರಗೌಡ ಮತ್ತಿತರ ಮುಖಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿದರು. ಈ ವೇಳೆ ಹೂ ಮಳೆಯೂ ಸುರಿಯಿತು.

ಜಿಲ್ಲೆಯಲ್ಲಿ ಪ್ರಭುತ್ವ ಸಾಧಿಸಿದ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡದೊಡ್ಡ ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು, ಗೆಲುವು ಕಂಡ ಆರ್.ರಾಜೇಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು, ಸಂಭ್ರಮಿಸಿದರು. ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲ.

411 ಮತಗಳ ಕೊರತೆ ಬಿತ್ತು ; ಮ್ಯಾಜಿಕ್ ನಂಬರ್ ಪಡೆಯಲು ಆರ್.ರಾಜೇಂದ್ರಗೆ 411 ಮತಗಳ ಕೊರತೆಬಿದ್ದಿತ್ತು. 3ನೇ ಸ್ಥಾನದಲ್ಲಿದ್ದ ಅನಿಲ್‌ಕುಮಾರ್ ಪಡೆದ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭವಾಯಿತು. 306 ಮತ ಪಡೆದರೂ ಮ್ಯಾಜಿಕ್ ನಂಬರ್ ಬರಲಿಲ್ಲ. ಅಂತಿಮವಾಗಿ ಎರಡನೇ ಸ್ಥಾನದಲ್ಲಿದ್ದ ಲೋಕೇಶ್‌ಗೌಡ ಅವರನ್ನೂ ಎಲಿಮಿನೇಟ್ ಮಾಡಿ 579 ಮತಗಳನ್ನು ರಾಜೇಂದ್ರ ಖಾತೆಗೆ ವರ್ಗಾಯಿಸಿದ್ದರಿಂದ ಕಾಂಗ್ರೆಸ್‌ಗೆ 18 ವರ್ಷದ ನಂತರ ಜಿಲ್ಲೆಯಲ್ಲಿ ಗೆಲುವು ಸಿಕ್ಕಿತು. ಮಧ್ಯಾಹ್ನಕ್ಕೆ ಮೊದಲ ಪ್ರಾಶಸ್ತ್ಯ ಮತದಲ್ಲೇ ಕಾಂಗ್ರೆಸ್‌ನ ಆರ್.ರಾಜೇಂದ್ರ 2250 ಮತಗಳನ್ನು ಪಡೆದು 493 ಹೆಚ್ಚು ಮತಗಳ ಮುನ್ನಡೆ ಪಡೆಯುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂಭಾಗ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿಶಾಲಿಯಾಗಿರುವ ಕಾರಣಕ್ಕೆ ನನ್ನ ಗೆಲುವು ಸಾಧ್ಯವಾಗಿದೆ, ಜಿಲ್ಲೆಯೆಲ್ಲೆಡೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಗೆಲುವಿಗೆ ಶ್ರಮಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷದ ಹೆಚ್ಚು ಅಭ್ಯರ್ಥಿಗಳು ಗೆಲುವು ಪಡೆಯಲು ಈ ಫಲಿತಾಂಶ ದಿಕ್ಸೂಚಿಯಾಗಿದೆ. ಆರ್.ರಾಜೇಂದ್ರ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವಾಗಲೇ ನಮ್ಮ ವರಿಷ್ಠರು ಜಿಲ್ಲೆಯಲ್ಲಿ ನಮ್ಮ ಪಕ್ಷದ ಗ್ರಾಪಂ ಸದಸ್ಯರ ಸಂಖ್ಯೆ ಕಡಿಮೆ ಇರುವ ಬಗ್ಗೆ ತಿಳಿಸಿ, ಹೆಚ್ಚು ಕೆಲಸ ಮಾಡಲು ತಿಳಿಸಿದ್ದರು, ಜಿಲ್ಲೆಗೆ ಹೊಸಬನಾದರೂ ಮತದಾರರು 2ನೇ ಸ್ಥಾನ ನೀಡಿದ್ದಾರೆ. ಎಲ್ಲ ಮುಖಂಡರು, ಕಾರ್ಯಕರ್ತರು ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು, ಸೋಲಿನ ಹೊಣೆ ಯಾರ ಮೇಲೂ ಹೇಳುವುದಿಲ್ಲ. ಲೋಕೇಶ್‌ಗೌಡ ಬಿಜೆಪಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net