ವಿವಿ ಅಂಕಪಟ್ಟಿ ವಿತರಣೆ ಗೊಂದಲ

Published on

ಬಳ್ಳಾರಿ : ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯೂ ಶೈಕ್ಷಣಿಕ ಸುಧಾರಣೆ ಸುಧಾರಣೆಗಿಂತ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡು ಮತ್ತೋಮ್ಮೆ ಚರ್ಚೆ ಮುನ್ನಲೆಗೆ ಬಂದಿದೆ.

ವಿವಿಯೂ ಕಳೆದ 2024-25ನೇ ಸಾಲಿನ ಸ್ನಾತಕ ಪದವಿಯ ಐದು ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆ ಪೂರ್ಣಗೊಂಡ ಏಳು ದಿನದಲ್ಲಿಯೇ ಫಲಿತಾಂಶ ಪ್ರಕಟಣೆ ಹಾಗೂ ಕಳೆದ ಮೂರು ವರ್ಷಗಳ ಬಳಿಕ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಿ ಅನುಕೂಲ ಮಾಡಿತ್ತು. ಆದರೆ, 2022-23ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ತಾಂತ್ರಿಕ ದೋಷದಿಂದ ಆರು ಸೆಮಿಸ್ಟರ್‌ನಲ್ಲಿ ಪಾಸಾದರೂ ಪೂರ್ಣ ಪ್ರಮಾಣದ ಅಂಕಪಟ್ಟಿಗಳು ಮಾತ್ರ ಕೈ ಸೇರಿಲ್ಲ. ಇದರಿಂದ ಪದವಿ ಪೂರ್ಣಗೊಳಿಸಿ ಪ್ರಸ್ತಕ ಸಾಲಿನ ಉನ್ನತ ವ್ಯಾಸಂಗದ ಕನಸು ಕಮರಲಿದೆ ಎಂಬ ಅತಂಕ ವಿದ್ಯಾರ್ಥಿಗಳಿಗೆ ಉಂಟಾಗಿದೆ.

ಏನಿದು ಗೊಂದಲ : ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ 80ಕ್ಕೂ ಅಧಿಕ ಪದವಿ ಕಾಲೇಜುಗಳು ವ್ಯಾಪ್ತಿಗೆ ಒಳಪಟ್ಟಿವೆ. ಇದರಲ್ಲಿ 2021-22 ಸಾಲಿನಲ್ಲಿ ಎನ್‌ಇಪಿ ಜಾರಿಗೊಳಿಸಿದ ಬಳಿಕ ಯುಯುಸಿಎಂಎಸ್ ನಲ್ಲಿ ಪ್ರವೇಶಾತಿ ವಿವರ, ದಾಖಲಾತಿ ಒದಗಿಸುವಂತೆ ಸೂಚಿಸಲಾಗಿತ್ತು. ಮೊದಲ ಸೆಮಿಸ್ಟರ್‌ನ ಕೆಲ ವಿಷಯಗಳಲ್ಲಿ ಉತ್ತೀರ್ಣಗೊಂಡ ಅಂಕಪಟ್ಟಿ ಹಾಗೂ ಮರು ಪರೀಕ್ಷೆಯಲ್ಲಿ ಪಾಸಾದ ವಿಷಯಗಳ ಅಂಕಪಟ್ಟಿ ಪ್ರತ್ಯೇಕವಾಗಿ ಬರಲಿದೆ. ಆದರೆ, ಈಗ ಕೇವಲ ಮರುಪರೀಕ್ಷೆಯಲ್ಲಿ ಪಾಸಾದ ಅಂಕಪಟ್ಟಿ ಮಾತ್ರ ವಿದ್ಯಾರ್ಥಿಗಳಿಗೆ ತಲುಪಿದೆ. ಒಂದನೇ ಸೆಮಿಸ್ಟರ್‌ನಲ್ಲಿ ಪ್ರಥಮವಾಗಿ ಪಾಸಾದ ವಿಷಯಗಳ ಅಂಕಪಟ್ಟಿ ಇನ್ನೂ ಬಂದಿಲ್ಲ. ಅಲ್ಲದೆ, ಯುಯುಸಿಎಂಎಸ್ ತಂತ್ರಜ್ಞಾನದಲ್ಲಿಯೂ ಆ ಅಂಕಪಟ್ಟಿ ಬಗ್ಗೆ ಮಾಹಿತಿಲ್ಲ, ಯುಯುಸಿಎಂಎಸ್‌ನಲ್ಲಿ ದೂರು ಸಲ್ಲಿಸಿದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಈಗಾಗಲೇ ವಿವಿಯ ಸ್ನಾತಕೋತ್ತರ ಪದವಿಯ ದಾಖಲಾತಿ ಆರಂಭವಾಗಿದ್ದು ಇದೇ ಆ. 30ಕ್ಕೆ ಕೊನೆಯ ದಿನಾಂಕವಾಗಿದೆ. ಆದ್ದರಿಂದ, ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಕಾಲೇಜು ಪ್ರಾಚಾರ್ಯರಿಗೆ ದೂರು ನೀಡಿದರೂ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ. ವಿದ್ಯಾರ್ಥಿಗಳೇ ನೇರವಾಗಿ ವಿವಿ ಮೌಲ್ಯಮಾಪನ ಕುಲಸಚಿವರ ಬಳಿ ಅಂಕಪಟ್ಟಿ ದೋಷದ ಬಗ್ಗೆ ವಿವರಿಸಿದ್ದಾರೆ.

ನುಣುಚಿಕೊಳ್ಳುವ ಯತ್ನ : ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆಗೆ ಸಂಬಂಧಿಸಿದಂತೆ ಆಯಾ ಕಾಲೇಜಿನ ಪ್ರಾಚಾರ್ಯರ ಕರ್ತವ್ಯವಾಗಿರುತ್ತದೆ. ಇಂತಹ ದೋಷಗಳು ಕಂಡು ಬಂದಲ್ಲಿ ಕಾರ್ಯ ಪ್ರವೃತ್ತರಾಗಿ ವಿವಿ ಜತೆಗೆ ಚರ್ಚಿಸಿ ಅಂಕಪಟ್ಟಿ ವಿತರಿಸಿ ಅನುಕೂಲ ಮಾಡಿಕೊಡಬೇಕು. ಆದರೆ, ದೋಷಗಳ ಬಗ್ಗೆ ವಿದ್ಯಾರ್ಥಿಗಳಿಂದ ನೇರವಾಗಿ ಮನವಿ ಸಲ್ಲಿಸಿದರೆ ವಿವಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ವಿವಿಯಲ್ಲಿ ಸಮಸ್ಯೆ ಹೇಳಲು ಹೋದರೆ ಕಾಲೇಜು ಪ್ರಾಚಾರ್ಯರೆ ಬಂದು ಸರಿಪಡಿಸಿಕೊಳ್ಳಿ ಎಂದು ವಿವಿ ಸಿಬ್ಬಂದಿ ಹೇಳುತ್ತಿದೆ. ಒಟ್ಟಾರೆ ಕಾಲೇಜು ಹಾಗೂ ವಿವಿಗೆ ಅಲೆದಾಟ ಮಾತ್ರ ತಪ್ಪುತ್ತಿಲ್ಲ ಎಂದು ಪದವಿ ವಿದ್ಯಾರ್ಥಿ ಎಸ್.ಕೆ. ಮಂಜುನಾಥ ತಿಳಿಸಿದರು.

ಕೋಟ್... ಎರಡ್ಮೂರು ವರ್ಷಗಳಿಂದ ವಿತರಣೆಯಾಗದ ಪದವಿ ಅಂಕಪಟ್ಟಿಗಳನ್ನು ವಿತರಿಸಲಾಗಿದೆ. ಯುಯುಸಿಎಂಎಸ್ ತಾಂತ್ರಿಕ ದೋಷದಿಂದ ಕೆಲ ಅಂಕಪಟ್ಟಿಗಳು ವಿತರಣೆಯಾಗದೆ ಗಮನಕ್ಕೆ ಬಂದಿದ್ದು ಸರಿಪಡಿಸಲು ಕ್ರಮವಹಿಸುವೆ.

- ಪ್ರೊ.ಎಂ.ಎನ್.ಸಾಲಿ, ಮೌಲ್ಯಮಾಪನ ಕುಲಸಚಿವ, ವಿಎಸ್‌ಕೆ ವಿವಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net