ಲಾಕ್​ಡೌನ್ ನಿಯಮ ಪಾಲನೆ ಗೊಂದಲ: ಮಾಸ್ಕ್ , ಉಚಿತ ಹಾಲು, ಆಹಾರಕ್ಕೆ ಪರದಾಟ | ಬೀದಿ ಬದಿ ವ್ಯಾಪಾರಿಗಳಿಗೆ ನಿತ್ಯ ಗೋಳು

lock down
Published on

ಬೆಂಗಳೂರು: ಲಾಕ್​ಡೌನ್ ಜಾರಿಯಲ್ಲಿರುವ ವೇಳೆ ಸರ್ಕಾರ ಮತ್ತು ಪಾಲಿಕೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಜನರು ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.

ರಾಜ್ಯ ಸರ್ಕಾರ ಮಾ.23 ರಿಂದ 31ರ ವರೆಗೆ ಲಾಕ್​ಡೌನ್ ಆದೇಶ ಜಾರೊಗೊಳಿಸಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಏ.14 ವರೆಗೆ ಲಾಕ್​ಡೌನ್ ಆದೇಶ ಹೊರಡಿಸಿತು. ಪರಿಸ್ಥಿತಿ ನಿಭಾಯಿಸಲು ಸರ್ಕಾರ, ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆ ವಿಭಿನ್ನ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಈ ನಿಯಮಗಳಲ್ಲೇ ಗೊಂದಲಗಳಿವೆ.

ಲಾಕ್​ಡೌನ್ ವೇಳೆ ಇಂದಿರಾ ಕ್ಯಾಂಟೀನ್​ಲ್ಲಿ ಉಚಿತ ಊಟ ನೀಡುವಂತೆ ಮಾ.23ರಂದು ಸಿಎಂ ಯಡಿಯೂರಪ್ಪ ಆದೇಶಿಸಿದರು. ಆದರೆ, ಉಚಿತ ಊಟ ನೀಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ, ಒಂದೇ ದಿನಕ್ಕೆ ಆದೇಶ ರದ್ದುಗೊಳಿಸಿದರು! ನಂತರ ಮಾ.25ರಿಂದ ಇಂದಿರಾ ಕ್ಯಾಂಟೀನ್ ಬಳಿ ಉಚಿತ ಆಹಾರ ಪೊಟ್ಟಣಗಳನ್ನು ವಿತರಣೆ ವ್ಯವಸ್ಥೆ ಮಾಡುತ್ತೇವೆ ಎಂದರು. ಆದರೆ ಇದರಲ್ಲಿಯೂ ಅವ್ಯವಹಾರ ನಡೆಯುತ್ತಿದೆ ಎಂಬ ಕಾರಣಕ್ಕೆ ಏ.3ರಂದು ಉಚಿತ ಆಹಾರ ವಿತರಣೆ ರದ್ದುಗೊಳಿಸಲಾಗಿದೆ. ಹಿಂದೆ ಇದ್ದಂತೆ ತಿಂಡಿಗೆ 5 ರೂ. ಮತ್ತು ಊಟಕ್ಕೆ 10 ರೂ. ಪಾವತಿಸಬೇಕಿದೆ.

ಹಾಲು ವಿತರಣೆಯಿಂದ ಸೋಂಕು?: ಏ.2ರಿಂದ ನಗರದ ಕೂಲಿ ಕಾರ್ವಿುಕರು, ಕೊಳೆಗೇರಿ ಮತ್ತು ಬಡಜನರು ವಾಸವಿರುವ ಕೆಲವು ವಾರ್ಡ್​ಗಳಲ್ಲಿ ಸರ್ಕಾರ ಉಚಿತ ಹಾಲು ನೀಡಲು ಮುಂದಾಗಿದೆ. ಸರ್ಕಾರದ ನಿರ್ಧಾರದಿಂದ ಹೆಚ್ಚುವರಿ ಹಾಲಿನ ಸದುಪಯೋಗ ಆಗುತ್ತಿದೆಯಾದರೂ, ಇದರಿಂದ ಕರೊನಾ ಸೋಂಕು ಹರಡುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆಗಳೂ ವರದಿಯಾಗಿವೆ.

ಹಾಲಿನ ಬೂತ್​ನಲ್ಲಿ ತರಕಾರಿ, ಹಣ್ಣು: ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರಿಗೆ ನೆರವಾಗುವ ಉದ್ದೇಶದಿಂದ ನಂದಿನಿ ಹಾಲಿನ ಮಾರಾಟ ಕೇಂದ್ರಗಳಲ್ಲಿ (ಬೂತ್) ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಆದರೆ ಲಕ್ಷಾಂತರ ಲೀಟರ್ ಹಾಲನ್ನು ಕೆಲವೆಡೆ ಉಚಿತವಾಗಿ ನೀಡಲಾಗುತ್ತಿದ್ದು, ಈ ಕ್ರಮ ಎಷ್ಟು ಯಶಸ್ವಿಯಾಗುತ್ತದೆ ಎಂಬುದು ತಿಳಿಯುತ್ತಿಲ್ಲ.

ವಸತಿ ಗೃಹಗಳಿಗೆ ನೇರ ಮಾರಾಟ: ಎಪಿಎಂಸಿ ಹಾಗೂ ಹಾಪ್​ಕಾಮ್್ಸ ವತಿಯಿಂದ ನಗರದ ವಸತಿ ಸಂಕೀರ್ಣಗಳಿಗೆ ವಾಹನಗಳ ಮೂಲಕ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ಸರ್ಕಾರ ಮತ್ತು ಪಾಲಿಕೆ ಮುಂದಾಗಿದೆ. ಆದರೆ ಇದರಿಂದ ತರಕಾರಿ ಮಾರಾಟಕ್ಕೆ ಯಾರನ್ನು ಕಳುಹಿಸಬೇಕು ಎಂದು ಸರ್ಕಾರ ಗೊಂದಲದಲ್ಲಿದೆ. ಅಲ್ಲದೇ, ಮಾರಾಟಗಾರರಿಗೆ ಸೋಂಕು ಇದ್ದರೆ ಏನು ಮಾಡುವುದು ಎಂಬ ಭಯಕ್ಕೆ ಅಪಾರ್ಟ್​ವೆುಂಟ್ ನಿವಾಸಿಗಳು ಒಳಗಾಗಿದ್ದಾರೆ.

ಸಾವಿರಾರು ವ್ಯಾಪಾರಿಗಳಿಗೆ ದುಡಿಮೆ ಇಲ್ಲ

ಬಿಬಿಎಂಪಿ ಬೀದಿಬದಿ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಇದರಿಂದ ನಗರದಲ್ಲಿ ನೆಲೆಸಿರುವ ಸುಮಾರು 10 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ದುಡಿಮೆಯಿಲ್ಲದೇ ಗೋಳಾಡುತ್ತಿದ್ದಾರೆ. ಇವರಿಗೆ ನೆರವಾಗಲು ಕೆಲವು ಶಾಸಕರು ಮತ್ತು ಪಾಲಿಕೆ ಸದಸ್ಯರು ಮೈದಾನಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಆದರೆ, ಪಾಲಿಕೆ ನಿಷೇಧದ ಕಾರಣ ಪೊಲೀಸರು ತಕ್ಷಣವೇ ಬಂದು ತೆರವುಗೊಳಿಸುತ್ತಾರೆ!

ಮಾರಾಟವಾಗದ ಕ್ಯಾಂಟೀನ್ ಊಟ

ನಗರದ 160 ಇಂದಿರಾ ಕ್ಯಾಂಟೀನ್​ಗಳಲ್ಲಿ ಪಾಲಿಕೆ ಏ.3ರವರೆಗೆ 2 ಲಕ್ಷಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿತ್ತು. ಆದರೆ, ಶನಿವಾರದಿಂದ (ಏ.4) ಹಣ ಪಾವತಿಸಿ ಊಟ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಶೇ.40 ಆಹಾರ ಪೊಟ್ಟಣಗಳು ಮಾರಾಟವಾಗದೇ ಉಳಿದಿವೆ. ಸಾವಿರಾರು ನಿರಾಶ್ರಿತರು, ಕೂಲಿ ಕಾರ್ವಿುಕರು, ಬಡಜನರು ದುಡಿಮೆಯಿಲ್ಲದೆ ಹಣ ಪಾವತಿಸಿ ಆಹಾರ ಪಡೆಯಲಾಗದೇ ಉಪವಾಸ ಬೀಳುವಂತಾಗಿದೆ.

ಮಾಸ್ಕ್ ಕಡ್ಡಾಯವಲ್ಲ

ಕರೊನಾ ಸೋಂಕಿನ ಲಕ್ಷಣಗಳಾದ ಕೆಮ್ಮು, ಸೀನುವುದು, ಜ್ವರ, ಉಸಿರಾಟ ಸಮಸ್ಯೆ ಮಾತ್ರ ಮಾಸ್ಕ್ ಧರಿಸಬೇಕು ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ತಿಳಿಸುತ್ತದೆ. ಆದರೆ ಲಾಕ್​ಡೌನ್ ವೇಳೆ ಅಗತ್ಯ ಸಾಮಗ್ರಿ ಖರೀದಿಗೆ ಹೊರಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮಳಿಗೆ ವ್ಯವಸ್ಥಾಪಕರು, ಪೊಲೀಸರು ತಿಳಿಸುತ್ತಾರೆ. ಈ ಗೊಂದಲಕ್ಕೆ ಪರಿಹಾರವೇ ಇಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net