ಗಣೇಶ ಚತುರ್ಥಿ ಆಚರಣೆಯಲ್ಲಿ ಗೊಂದಲ

GANESH
Published on

ಕಾರವಾರ: ಗಣೇಶ ಚತುರ್ಥಿಯ ಆಚರಣೆಯ ದಿನಾಂಕದಲ್ಲಿ ವ್ಯತ್ಯಾಸವಿರುವುದು ಗೊಂದಲಕ್ಕೆ ಕಾರಣವಾಗಿದೆ. ಕೆಲ ಪಂಚಾಂಗಗಳಲ್ಲಿ ಸೆ.18 ರಂದು ಹಾಗೂ ಕೆಲ ಕ್ಯಾಲೆಂಡರ್‌ಗಳಲ್ಲಿ ಸೆ.19 ರಂದು ವಿನಾಯಕ ಚತುರ್ಥಿ ಎಂದು ಸೂಚಿಸಲಾಗಿದೆ.

ರಾಜ್ಯದಲ್ಲಿ ಸೆ. 18ರಂದು ಗಣೇಶನ ಹಬ್ಬದ ಸರ್ಕಾರಿ ರಜೆ ೋಷಿಸಲಾಗಿದೆ. ಆದರೆ, ಸೆ. 19 ರಂದು ಉತ್ತರ ಕನ್ನಡ ಸೇರಿ ಕೆಲವೆಡೆ ಹಬ್ಬ ಆಚರಣೆ ಇರುವುದರಿಂದ ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ಹಾಗೂ ಇತರ ನೌಕರರು ರಜೆ ಇಲ್ಲದೆ ಸಮಸ್ಯೆ ಎದುರಿಸಬೇಕಾಗಿದೆ.

ಏಕೆ ವ್ಯತ್ಯಾಸ..?

ಶತ, ಶತಮಾನಗಳಿಂದಲೂ ಎರಡು ಸಿದ್ಧಾಂತಗಳ ಆಧಾರದ ಮೇಲೆ ಹಿಂದು ಪಂಚಾಂಗಗಳನ್ನು ರಚಿಸಲಾಗುತ್ತ್ತಿದೆ. ಸನಾತನ ಹಬ್ಬಗಳು, ಜಾತ್ರೆ, ಗ್ರಹಣ ಮುಂತಾದ ಆಚರಣೆಗಳ ವಿವರ ಇಂಥ ಪಂಚಾಂಗಗಳಲ್ಲಿ ಇರುತ್ತದೆ. ಸೂರ್ಯ ಸಿದ್ಧಾಂತದ ಆಧಾರದ ಮೇಲೆ ಒಂದಷ್ಟು ಪಂಚಾಂಗಗಳು ರಚನೆಯಾದರೆ, ಇನ್ನೊಂದಿಷ್ಟು ಪಂಚಾಂಗಗಳು ದೃಕ್ ಸಿದ್ಧಾಂತ ಆಧಾರದ ಮೇಲೆ ರಚನೆಯಾಗುತ್ತದೆ. ಹಬ್ಬ ಆಚರಿಸುವ ದಿನವನ್ನು ನಿರ್ಧರಿಸುವ ಪದ್ಧತಿ ಎರಡೂ ಸಿದ್ಧಾಂತಗಳಲ್ಲಿ ಭಿನ್ನವಾಗಿರುವುದರಿಂದ ಕೆಲವು ವರ್ಷ ಹಬ್ಬಗಳ ದಿನಾಂಕಗಳಲ್ಲಿ ವ್ಯತ್ಯಾಸ ಬರುತ್ತದೆ ಎನ್ನುತ್ತಾರೆ ಪಂಡಿತರು.

ದಿನವೊಂದರಲ್ಲಿ ಕನಿಷ್ಠ ಇಂತಿಷ್ಟು ಘಳಿಗೆ, ಘಟಿ (ಹಿಂದು ಪಂಚಾಂಗದಲ್ಲಿ ಹೊತ್ತನ್ನು ಲೆಕ್ಕ ಹಾಕುವ ವಿಧಾನ) ಇದ್ದರೆ ಮಾತ್ರ ಅಂದು ಅಥವಾ ಆ ತಿಥಿ(ಹಿಂದು ಪಂಚಾಂಗದ ದಿನ)ಯಂದು ಹಬ್ಬ ಆಚರಿಸಬಹುದು ಎಂದು ದೃಕ್ ಸಿದ್ಧಾಂತ ಹೇಳುತ್ತದೆ. ಸೂರ್ಯೋದಯದ ಆಧಾರದ ಮೇಲೆ ಸೂರ್ಯ ಸಿದ್ಧಾಂತದ ಪಂಚಾಂಗಗಳು ಹಬ್ಬದ ದಿನವನ್ನು ನಿರ್ಧರಿಸುತ್ತವೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಆಚರಿಸುವ ಗಣೇಶ ಚತುರ್ಥಿಯನ್ನು ಈ ವರ್ಷ ಸೆ. 18 ರಂದು ನಡೆಸಬೇಕು ಎಂದು ಸೂರ್ಯ ಸಿದ್ಧಾಂತದ ಪಂಚಾಂಗಗಳು ಬರೆದಿವೆ. ಸೆ. 19 ರಂದು ಆಚರಿಸಬೇಕು ಎಂದು ದೃಕ್ ಸಿದ್ಧಾಂತದ ಪಂಚಾಂಗಗಳು ಬರೆದಿವೆ. ಪ್ರತಿಯೊಬ್ಬರೂ ತಮ್ಮ ಪರಂಪರೆಯಿಂದ ಯಾವ ಪಂಚಾಂಗ ಅನುಸರಿಸುತ್ತಿದ್ದಾರೆ ಎಂಬುದರ ಮೇಲೆ ಹಬ್ಬವನ್ನೂ ನಿರ್ಧರಿಸಿಕೊಳ್ಳಬಹುದು ಎನ್ನುತ್ತಾರೆ ಬಗ್ಗೋಣ ಪಂಚಾಂಗ ಕರ್ತ ಗೋಕರ್ಣದ ವೆಂಕಟೇಶ್ವರ ಪಂಡಿತ್.

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೆ. 19ರಂದು ಗಣೇಶ ಚತುರ್ಥಿ ಆಚರಣೆ ಇದೆ. ರಜೆ ಮಾತ್ರ 18ಕ್ಕಿದೆ. ಅಪರೂಪಕ್ಕೊಮ್ಮೆ ಇಂಥ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಆಯ್ದ ಜಿಲ್ಲೆಗಳಿಗೆ ರಜೆಯಲ್ಲಿ ಬದಲಾವಣೆ ಮಾಡಬೇಕು ಎಂದು ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.i ಸಂಜೀವಕುಮಾರ ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ……..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net