

ಮೈಸೂರು: ಮುಡಾದಲ್ಲಿ ಶೇ.50:50ರ ಅನುಪಾತದಲ್ಲಿ ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಲು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಮೂಲ ರೂವಾರಿಯಾಗಿದ್ದು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯಾಂಶ ಬಯಲಿಗೆ ಬರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 14-7-21 ನಟೇಶ್ ಬರೆದ ಪತ್ರದಲ್ಲಿ ‘ಮಲ್ಲಿಕಾರ್ಜುನಸ್ವಾಮಿ ಅವರು ಪಾರ್ವತಿಗೆ 3.16 ಎಕರೆ ಜಾಗ ಮಾರಾಟ ಮಾಡಿದ್ದಾರೆ’ ಎಂದು ಬರೆದಿದ್ದಾರೆ. ಆದರೆ, ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಈ ಜಾಗ ಮಲ್ಲಿಕಾರ್ಜುನಸ್ವಾಮಿ ಅವರಿಂದ ನಮಗೆ ದಾನದ ಮೂಲಕ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದಲ್ಲಿ ಸಿದ್ದರಾಮಯ್ಯ ಹೇಳುತ್ತಿರುವುದು ಸರಿಯೋ? ನಟೇಶ್ ಹೇಳುತ್ತಿರುವುದು ಸರಿಯೋ ಅಥವಾ ದಾಖಲೆಗಳು ಸರಿಯೋ ಎಂಬುದು ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಈ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.