ಸ್ಪಷ್ಟತೆ ಸಿಗದ ಮೆಡಿಕಲ್ ಅನ್‌ಫಿಟ್ ಯೋಜನೆ

24 HATTI 2
Published on

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಗೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟಿದೆ. ಎಷ್ಟು ವರ್ಷ ಕನಿಷ್ಠ ಸೇವೆ ಹೊಂದಿರಬೇಕು ಮತ್ತು ಯಾವಾಗಿನಿಂದ ಯೋಜನೆ ಅನ್ವಯವಾಗಲಿದೆ ಎಂಬ ಪ್ರಶ್ನೆ ಕಾರ್ಮಿಕರಲ್ಲಿದೆ.

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಹಟ್ಟಿಚಿನ್ನದಗಣಿ ಕಂಪನಿಯ 432ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ವೈದ್ಯಕೀಯ ಅನರ್ಹತೆ ಆಧಾರದ ಮೇಲೆ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಒದಗಿಸುವ ಯೋಜನೆಗೆ 5 ವರ್ಷದ ಬಾಕಿ ಸೇವಾವಧಿಯ ಷರತ್ತಿಗೆ ವಿನಾಯಿತಿ ನೀಡಿ ಅನುಷ್ಠಾನಗೊಳಿಸಲು ನಿರ್ದೇಶಕ ಮಂಡಳಿ ಅನುಮೋದನೆ ನೀಡಿದೆ.

ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಯೋಜನೆ ಕಳೆದ 6 ವರ್ಷಗಳಿಂದ ಸ್ಥಗಿತವಾಗಿದೆ. ಇದರಿಂದಾಗಿ ಕಂಪನಿಯನ್ನು ನಂಬಿ ಬದುಕು ಸಾಗಿಸುತ್ತಿರುವ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 431 ಹಾಗೂ 432ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ನೌಕರಿ ನೀಡುವ ಭರವಸೆ ನೀಡಿದ್ದರೂ ಸ್ಪಷ್ಟ ಚಿತ್ರಣ ಇನ್ನೂ ಸಿಗದೆ ಇರುವದರಿಂದ ಕಾರ್ಮಿಕರು ಗೊಂದಲದಲ್ಲಿ ಸಿಲುಕಿದ್ದಾರೆ. ಯೋಜನೆ ಶೀಘ್ರ ಜಾರಿಯಾಗುವುದೇ ಎಂದು ನಿವೃತ್ತಿ ಅಂಚಿನಲ್ಲಿರುವ ಕಾರ್ಮಿಕರು ಕಾದು ಕುಳಿತಿದ್ದಾರೆ.

ಸೇವಾವಧಿ ಪರಿಗಣಿಸದೆ ಅರ್ಹ ನೌಕರರ ಕುಟುಂಬಸ್ಥರಿಗೆ ನೌಕರಿ ಒದಗಿಸಿಕೊಡಬೇಕೆಂದು ಎಐಟಿಯುಸಿ ನೇತೃತ್ವದ ಕಾರ್ಮಿಕ ಸಂಘ ಆಡಳಿತ ವರ್ಗದ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಸೆ.27ರಂದು ಹಟ್ಟಿಚಿನ್ನಗಣಿಗೆ ವ್ಯವಸ್ಥಾಪಕ ನಿರ್ದೇಶಕ ಆಗಮಿಸಲಿದ್ದು, ನೌಕರಿ ಪಡೆದುಕೊಳ್ಳುವ ಫಲಾನುಭವಿ ಕಾರ್ಮಿಕರಿಂದ ಅರ್ಜಿ ಪಡೆಯಲಿದ್ದಾರೆ. ಫಲಾನುಭವಿಗಳ ಸಂಖ್ಯೆ ಆಧಾರದ ಮೇಲೆ ಎಷ್ಟು ವರ್ಷ ಕನಿಷ್ಠ ಸೇವೆ ಹೊಂದಿದವರ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂದು ಸೆ.27ರ ನಂತರವೇ ತೀರ್ಮಾನವಾಗುವ ಸಾಧ್ಯತೆ ಇದೆ. ಕಂಪನಿ ಅಸ್ತು ಎಂದರೆ 400ಕ್ಕೂ ಹೆಚ್ಚು ಕಾರ್ಮಿಕರ ಅವಲಂಬಿತರು ಯೋಜನೆಯ ಲಾಭ ಪಡೆಯಬಹುದಾಗಿದೆ.

ಅನ್‌ಫಿಟ್ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುವ ಯೋಜನೆ ಜಾರಿ ಕುರಿತ ಪ್ರಕ್ರಿಯೆಗಳು ಆರಂಭವಾದರೆ ನಿವೃತ್ತಿಯಾಗಿ ಮನೆ ಸೇರುತ್ತಿರುವ ಕಾರ್ಮಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಆದಷ್ಟು ಬೇಗನೆ ಪ್ರಕಟಣೆ ಹೊರಡಿಸಲಿ ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net