

ಮದ್ದೂರು: ಕೆರಗೋಡು ಹನುಮ ಧ್ವಜದ ವಿಷಯದಲ್ಲಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯ, ಶ್ರೀಪಟ್ಟಾಭಿರಾಮ, ಶ್ರೀವರದರಾಜಸ್ವಾಮಿ ದೇವಾಲಯಗಳಿಗೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕೆರಗೋಡು ಗ್ರಾಮಕ್ಕೆ ನಾನು ರಾಜಕೀಯ ಉದ್ದೇಶದಿಂದ ಬಂದಿಲ್ಲ. ನಾನು ಪ್ರತಿನಿಧಿಸುವ ಗಂಗಾವತಿ ಕ್ಷೇತ್ರದಲ್ಲಿ ಅಂಜನಾದ್ರಿ ಇದೆ. ಅಂಜನಾದ್ರಿ ಆಂಜನೇಯ ಹುಟ್ಟಿದ ಸ್ಥಳ. ಹಾಗಾಗಿ ನನಗೆ ಆ ಅವಿನಾಭಾವ ಸಂಬಂಧದಿಂದ ಕೆರಗೋಡಿಗೆ ಬಂದು ಮಾಹಿತಿ ಪಡೆದುಕೊಂಡಿದ್ದೇನೆ. ಸರ್ಕಾರ ಅನವಶ್ಯಕವಾಗಿ ಹನುಮಧ್ವಜ ಇಳಿಸುವ ಸಾಹಸಕ್ಕೆ ಕೈ ಹಾಕಿದೆ, ಅದು ಸರಿಯಲ್ಲ ಎಂದರು.
ಹಿಂದೆ ಹನುಮಂತನ ಬಾಲಕ್ಕೆ ರಾವಣ ಬೆಂಕಿ ಹಚ್ಚಿದಾಗ ಲಂಕಾ ದಹನವಾಯಿತು. ಪ್ರಸ್ತುತದಲ್ಲಿ ಹನುಮಧ್ವಜಕ್ಕೆ ಸರ್ಕಾರ ಕೈ ಹಾಕುವ ಮೂಲಕ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿಪರೀತ ಬುದ್ಧಿಯಿಂದ ವಿನಾಶಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಾಗಲಿದೆ ಎಂದು ಸರ್ಕಾರದ ನೀತಿಯನ್ನು ಕಟುವಾಗಿ ಖಂಡಿಸಿದರು.
ಕೆರಗೋಡು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಶಾಂತಿಸಭೆ ನಡೆಸಿ ಮತ್ತೆ ಹನುಮ ಧ್ವಜವನ್ನು ಹಾರಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಕ್ಕೆ ಶಾಂತಿಯ ಸಂದೇಶವನ್ನು ಸಾರಬೇಕು ಎಂದರು.
ಮುಖಂಡರಾದ ಶರವಣ್, ಜಗದೀಶ್, ಅನಿಲ್, ವೀರಭದ್ರಸ್ವಾಮಿ, ಗುರುಮಲ್ಲೇಶ್, ಎಂ.ಸಿ.ಲಿಂಗರಾಜು, ಚೈತನ್ಯಾರಾಧ್ಯ, ಶ್ರೇಯಸ್, ಗುರುಸ್ವಾಮಿ, ದೇವರಾಜು ಇದ್ದರು.