ಗೊಂದಲ ಮೂಡಿಸುತ್ತಿರುವ ಫಲಕಗಳು

BOARD
Published on

ಶಿರಸಿ: ಮಳೆಗಾಲ ಮುಕ್ತಾಯಗೊಂಡಿದೆ. ಆಗೊಮ್ಮೆ ಈಗೊಮ್ಮೆ ಸಣ್ಣ ಪ್ರಮಾಣದ ಮಳೆ ಬೀಳುತ್ತಿದೆ. ಜಲಪಾತಗಳು ಮೈ ತುಂಬಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ, ಪೊಲೀಸ್ ಇಲಾಖೆ ಪ್ರವಾಸಿ ತಾಣಗಳಲ್ಲಿ ಅಳವಡಿಸಿರುವ ನಿಷೇಧಿಸಲಾಗಿದೆ ಎಂಬ ಫಲಕ ಪ್ರವಾಸಿಗರನ್ನು ಗೊಂದಲಕ್ಕೀಡು ಮಾಡಿದೆ.

ತಾಲೂಕಿನ ಕುಮಟಾ ರಸ್ತೆಯ ಬೆಣ್ಣೆ ಹೊಳೆ ಜಲಪಾತ, ಮುರೇಗಾರ್ ಜಲಪಾತ, ಶಿವಗಂಗಾ ಜಲಪಾತ ಮತ್ತಿತರೆಡೆ ಈ ರೀತಿಯ ಫಲಕಗಳು ಪ್ರವಾಸಿಗರು ಗೊಂದಲಗೊಳ್ಳುವಂತೆ ಮಾಡಿದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಗಾಳಿ-ಅಬ್ಬರದ ಮಳೆ ಆರಂಭಗೊಂಡಾಗ ಪ್ರವಾಸಿ ತಾಣಗಳ ಭೇಟಿ ಕಷ್ಟಕರವಾಗಿತ್ತು. ನೀರಿನ ಪ್ರವಾಹ ಸಹ ಜಾಸ್ತಿ ಇತ್ತು. ಕೆಲ ಉತ್ಸಾಹಿಗಳು ಮಳೆ ಗಾಳಿಯನ್ನೂ ಲೆಕ್ಕಿಸದೇ ಜಲಪಾತಗಳಿಗೆ ತೆರಳಿ ನೀರಿಗಿಳಿಯುವ ದುಸ್ಸಾಹಸ ನಡೆಸುತ್ತಿದ್ದರು. ಇದರಿಂದಾಗುವ ಅಪಾಯ ತಪ್ಪಿಸುವ ಸಲುವಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಈ ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಹಾಗೂ ಪ್ರವಾಸಿ ತಾಣದ ಪ್ರವೇಶ ನಿಷೇಧಿಸಿ ಫಲಕ ಅಳವಡಿಸಿದ್ದರು. ಈಗ ಮಳೆ ನಿಂತ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಫಲಕಗಳು ಗೊಂದಲ ಮೂಡಿಸುತ್ತಿವೆ.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಗ್ರಾಮೀಣ ಠಾಣೆ ಪಿಎಸ್‌ಐ ಪ್ರತಾಪ, ಈಗ ಮಳೆ ಅಬ್ಬರ ನಿಂತಿರುವುದರಿಂದ ಪ್ರವಾಸಗರು ಜಾಸ್ತಿ ಬರುತ್ತಿದ್ದಾರೆ. ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಜಲಪಾತಗಳ ಭೇಟಿ ಸುರಕ್ಷಿತ ಎನಿಸಿದರೆ ಫಲಕಗಳನ್ನು ತೆರವುಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net