

ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ತಮ್ಮ ಮತ ಚಲಾಯಿಸಲು ಪಡೆಯುವ ಚುನಾವಣಾ ಕರ್ತವ್ಯ ಪ್ರಮಾಣಪತ್ರ (ಎಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್) ಹಾಗೂ ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್)ದ ಅರ್ಜಿ ಪಡೆದು ಮತ ಲಾಯಿಸಲಾಗದೆ ಪರದಾಡಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿ ಆನಂದ್ ಕುಮಾರ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ಗ್ರೇಡ್-2 ತಹಸೀಲ್ದಾರ್ ಆದರ್ಶ ನೇತೃತ್ವದಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತಿದ್ದು, ಹೊರ ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚು ನೌಕರರು ಕಡೆಯ ದಿನವಾದ ಏ.22ರ ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತ ಕೇಂದ್ರದಲ್ಲಿ ಅಂಚೆ ಮತದಾನದ ಮೂಲಕ ಹಲವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಕೆಲವರಿಗೆ ಸರಿಯಾದ ದಾಖಲೆಗಳಿಲ್ಲದ ಕಾರಣ ಮತ ಚಲಾಯಿಸಲಾಗಲಿಲ್ಲ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 742 ಮಂದಿ ನೌಕರರ ಇಡಿಸಿಗಳಲ್ಲಿ ಇದುವರೆಗೂ ಸುಮಾರು 300 ಮಂದಿಗೆ ಮಾತ್ರ ಆಯಾ ತಾಲೂಕುಗಳಿಂದ ಸಲ್ಲಿಸಿದ ದಾಖಲೆಗಳು ಲಭ್ಯವಾಗಿದ್ದು, ಇನ್ನು ಹಲವರ ದಾಖಲೆಗಳು ಸಿಗದೆ ಮತದಾನದಿಂದ ವಂಚಿತರಾಗುವ ಕಳವಳ ವ್ಯಕ್ತಪಡಿಸಿದರು.
ಸಮಸ್ಯೆ ಕುರಿತು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಪ್ರತಿಕ್ರಿಯಿಸಿ, ಮಂಡ್ಯ ಲೋಕಸಭಾ ವ್ಯಾಪ್ತಿಯ ಸರ್ಕಾರಿ ನೌಕರರ ಇಡಿಸಿ ಪತ್ರ ಪಡೆಯಲು ಮಾಹಿತಿ ಅರ್ಜಿ ಭರ್ತಿಗೆ 12ಎ ಫಾರಂ ಹಾಗೂ ಹೊರಜಿಲ್ಲೆಯ ನೌಕರರಿಗೆ ಫಾರಂ 12 ಅನ್ನು ಈ ಮೊದಲೇ ನೀಡಿ ವಿವರಿಸಲಾಗಿತ್ತು. ಆದರೆ ಇದರಲ್ಲಿ ಸಾಕಷ್ಟು ನೌಕರರು ಅದಲು-ಬದಲು ಫಾರಂ ಭರ್ತಿ ಮಾಡಿ ಸಲ್ಲಿಸಿದ್ದು, ಇನ್ನು ಕೆಲವರು ಎರಡು ಫಾರಂ ಭರ್ತಿ ಮಾಡಿ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಅಂಚೆ ಮತದಾನಕ್ಕೆ ಈ ದಿನವೇ ಅಂತಿಮವಾಗಿದೆ. ಆದರೆ ಈ ದಿನ ಇಡಿಸಿ ಪಡೆಯಲಾಗದ ನೌಕರರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಏ.25ರಂದು ಪುನಃ ವಿತರಣೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದ್ದು, ಯಾರೂ ಆತಂಕ ಪಡುವುದು ಬೇಡ ಎಂದರು. ಇದರಿಂದ ಸ್ಥಳದಲ್ಲಿ ಗೊಂದಲಕ್ಕೆ ಸಿಲುಕಿದ್ದ ಹಲವು ಸರ್ಕಾರಿ ನೌಕರರು ನಿರಾಳರಾದರು.