ಸಂಘರ್ಷ ರಾಜಕಾರಣದಿಂದ ಜನತೆಗೆ ಅನ್ಯಾಯ

FotoJet 1
Published on

ಕೇಂದ್ರದೊಂದಿಗೆ ಸ್ನೇಹಮಯ ಆಡಳಿತ ನಡೆಸಿ ರಾಜ್ಯ ಸರ್ಕಾರಕ್ಕೆ ಸಂಸದ ಕೆ. ಸುಧಾಕರ್ ಸಲಹೆ

ಬಾಗೇಪಲ್ಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಂಘರ್ಷ ರಾಜಕಾರಣದಿಂದ ನಾಡಿನ ಜನತೆಗೆ ಅನ್ಯಾಯವಾಗುತ್ತಿದೆಯೇ ಹೊರತು ಅಭಿವೃದ್ಧಿ ಆಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸ್ನೇಹಮಯಿ ಸರ್ಕಾರ ನಡೆಸಿ ಜನರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ಪಟ್ಟಣದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಹಾಗೂ ಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಸಂತಸದ ವಿಚಾರ. ಅಭಿವೃದ್ದಿ ಬಯಸುವ ಯಾವುದೇ ಸರ್ಕಾರಗಳು ಸಂಘರ್ಷಕ್ಕೆ ಇಳಿದರೆ ನಷ್ಟ ಅನುಭವಿಸಬೇಕಾಗುವುದೇ ಹೊರತು ಅಭಿವೃದ್ದಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರದಿಂದ ಗಿರಿಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ವೃತ್ತಿಪರ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳ ಮೂಲಕ ಸಹಾಯಧನ ನೀಡಿ ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ಗ್ರಾಮೀಣ ಜನತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ದೇಶದ ಯುವಪೀಳಿಗೆ ಪ್ರಮುಖ ಪಾತ್ರ ವಹಿಸಬೇಕೆಂದು ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ವಿ.ವೆಂಕಟಶಿವಾರೆಡ್ಡಿ, ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಟಿಎಚ್‌ಒ ಮಹೇಶ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಟಿ.ಕೋನಪರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ, ಕೆಡಿಪಿ ಸದಸ್ಯೆ ಮಮತಾ ನಾಗರಾಜುರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಸುಜಾತಾ ನಾಯ್ಡು, ನಿವೃತ್ತ ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ಕೇಂದ್ರ ಸಂವಹನ ಪ್ರಚಾರ ಅಧಿಕಾರಿ ಸ್ಮತಿ, ಕ್ಷೇತ್ರ ಪ್ರಚಾರಾಧಿಕಾರಿ ಪಿ.ದರ್ಶನ್, ಬಿಇಒ ವೆಂಕಟೇಶಪ್ಪ, ಪ್ರಾಂಶುಪಾಲ ಇಮ್ತಿಯಾಜ್ ಅಹಮದ್ ಮುಬೀನ್ ಮತ್ತಿತರರು ಇದ್ದರು.

ವಿವಿಧ ಯೋಜನೆಗಳ ಮಾಹಿತಿ ಪಡೆದ ಸಂಸದ

ನ್ಯಾಷನಲ್ ಕಾಲೇಜು ಸಂಸ್ಥಾಪಕ ಎಚ್. ನರಸಿಂಹಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾಲೇಜು ಆವರಣದಲ್ಲಿ ಸ್ಥಾಪಿಸಿದ್ದ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಕೇಂದ್ರ ಸರ್ಕಾರದ 150 ಹೆಚ್ಚು ಯೋಜನೆಗಳ ಮಾಹಿತಿಯುಳ್ಳ ಕರಪತ್ರಗಳನ್ನು ವೀಕ್ಷಿಸಿ, ವಿವಿಧ ಕೌಶಲ ತರಬೇತಿದಾರರು ಸಿದ್ಧಪಡಿಸಿದ್ದ ಹಲವು ಅಂಗಡಿ ಮಳಿಗೆಗೆ ಭೆೇಟಿ ನೀಡಿ ಮಾಹಿತಿ ಪಡೆದುಕೊಂಡ ಸಂಸದ ಸುಧಾಕರ್, ಸಂವಾದ ನಡೆಸಿ ಕೇಂದ್ರ ಸರ್ಕಾರದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

‘ನಮ್ಮ ನಡೆ ಜನತೆಯ ಕಡೆ’ಗೆ ಇಂದು ಚಾಲನೆ

ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ, ಅರಿವು ಕಾರ್ಯಕ್ರಮ, ಕುಂದುಕೊರತೆಗಳನ್ನು ಆಲಿಸುವ ಉದ್ದೇಶದೊಂದಿಗೆ ‘ನಮ್ಮ ನಡೆ ಜನತೆಯ ಕಡೆ’ ಕಾರ್ಯಕ್ರಮಕ್ಕೆ ಚೇಳೂರು ತಾಲೂಕಿನ ಚಾಕವೇಲು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.1 ರಂದು(ಭಾನುವಾರ) ಬೆಳಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುವುದು ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net