ಮುಖ್ಯಮಂತ್ರಿ-ರಾಜವಂಶಸ್ಥರ ನಡುವೆ ಮತ್ತೆ ಸಂಘರ್ಷ

Chamundi betta
Published on

ಆರ್.ಕೃಷ್ಣ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜವಂಶಸ್ಥರ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ.
ಕಾಕತಾಳೀಯ ಎಂಬಂತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೇ ರಾಜವಂಶಸ್ಥರ ನಡುವೆ ಹಿಂದಿನಿಂದಲೂ ತಿಕ್ಕಾಟ ನಡೆದುಕೊಂಡು ಬರುತ್ತಿವೆ. ಮೈಸೂರು, ಬೆಂಗಳೂರು ಅರಮನೆ ಆಸ್ತಿ ವಿಚಾರ ಸೇರಿದಂತೆ ಇಬ್ಬರ ನಡುವೆ ವಿವಾರ ಏರ್ಪಟ್ಟಿತ್ತು. ಈಗ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
ಚಾಮುಂಡಿಬೆಟ್ಟ, ದೇವಸ್ಥಾನ ರಾಜವಂಶಸ್ಥರಿಗೆ ಸೇರಿದ್ದು ಎನ್ನುವ ವಿಚಾರ ನ್ಯಾಯಾಲಯದಲ್ಲಿ ಇರುವಾಗ ಶ್ರೀ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯ ಇಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಮುಂಡಿಬೆಟ್ಟ ಸರ್ಕಾರಕ್ಕೆ ಸೇರಿದ್ದು ಎನ್ನುವ ವಾದ ಕೇಳಿ ಬರುತ್ತಿದೆ.
ಪ್ರವಾಸಿ ತಾಣವೂ ಅಗಿರುವ ಚಾಮುಂಡಿಬೆಟ್ಟವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಇಟ್ಟುಕೊಂಡು ರಾಜ್ಯ ಸರ್ಕಾರವು ಶ್ರೀಕ್ಷೇತ್ರ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿತು.
ಪ್ರಾಧಿಕಾರವಾದರೆ ಅಭಿವೃದ್ಧಿ ಕೆಲಸಗಳ ಅನುಷ್ಠಾನ ಸುಗಮವಾಗುತ್ತದೆ ಹಾಗೂ ಅನುದಾನದ ಲಭ್ಯತೆಯೂ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಬೆಟ್ಟವನ್ನು ಆಧುನಿಕರಣಗೊಳಿಸಿ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಸಹಕಾರಿ ಅಗುತ್ತದೆ ಎನ್ನುವ ಆಲೋಚನೆ ಇದರ ಹಿಂದಿದೆ.
ಆದರೆ ಪ್ರಾಧಿಕಾರ ರಚನೆಯೇ ಅಸಂವಿಧಾನಿಕ ಎಂದು ಪ್ರಾಧಿಕಾರ ರಚನೆಗೆ ರಾಜವಂಶದವರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವೆ ಮತ್ತೊಂದು ಕಾನೂನು ಸಮರ ಪ್ರಾರಂಭವಾಗಿದೆ.
ಚಾಮುಂಡಿ ಬೆಟ್ಟದ ದೇವಸ್ಥಾನವನ್ನು ನಿರ್ವಹಣೆ ಮಾಡಲಷ್ಟೇ ಸರ್ಕಾರಕ್ಕೆ ವಹಿಸಲಾಗಿತ್ತು. ಆದರೆ ಸರ್ಕಾರ ಪ್ರಾಧಿಕಾರವನ್ನು ರಚನೆ ಮಾಡುವ ಮೂಲಕ ದೇವಸ್ಥಾನದ ಮಾಲೀಕನಾಗಲು ಹೊರಟಿದೆ ಎನ್ನುವುದೇ ವಿವಾದ ಹುಟ್ಟಿಕೊಳ್ಳಲು ಮೂಲವಾಗಿದೆ.
ದೇವಸ್ಥಾನ ಸೇರಿದಂತೆ ಬೆಟ್ಟದಲ್ಲಿ ಇರುವ ರಾಜೇಂದ್ರ ವಿಲಾಸ ಅರಮನೆ ಜತೆಗೆ ಅದನ್ನು ಸೇರಿಕೊಂಡಂತೆ ಇರುವ ಕಟ್ಟಡಗಳು, ಉದ್ಯಾನ, ಪೆಷಕಾರ್ ಮನೆ, ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಕಟ್ಟಡಗಳು, ತಳಿಗೆ ಮನೆ. ರಥವನ್ನು ನಿಲ್ಲಿಸುವ ಜಾಗ, ಮಂಟಪ, ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ ಆವರಣ, ನಂದಿ ಆವರಣ, ಚಾಮುಂಡಿ ಪಾದ, ಮಧ್ಯದಲ್ಲಿ ಹಾಗೂ ಬೆಟ್ಟದಲ್ಲಿ ಇರುವ ಮೂರು ಪಂಪ್‌ಹೌಸ್‌ಗಳು ರಾಜಮನೆತನಕ್ಕೆ ಸೇರಿದೆ ಎನ್ನಲಾಗುತ್ತಿದೆ.
ಆದರೆ ಸರ್ಕಾರವು ಪ್ರಾಧಿಕಾರ ರಚನೆಯಲ್ಲಿ ದೇವಾಲಯಕ್ಕೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಒಡವೆಗಳು, ಉತ್ತರದಾಯಿತ್ವ ಎಲ್ಲವೂ ರಾಜ್ಯ ಸರ್ಕಾರದ ಮಾಲೀಕತ್ವಕ್ಕೆ ಒಳಪಡುತ್ತದೆ. ದೇವಸ್ಥಾನದ ಆಡಳಿತ ಹಾಗೂ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯೂ ಸರ್ಕಾರದ್ದೆ ಆಗಿದೆ ಎಂದಿದೆ.
ರಾಜಮನೆತನ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಮೈಸೂರು ಸೇರಿಂದತೆ ಸುತ್ತಮುತ್ತ ಊರುಗಳಲ್ಲಿ ರಾಜಮನೆತನಕ್ಕೆ ಸೇರಿದ ಅಸ್ತಿಯ ಒಡೆತನವನ್ನು ವಿವರಿಸಲಾಗಿದೆ. ಇದರಲ್ಲಿ ಕ್ರಮ ಸಂಖ್ಯೆ 62ರಲ್ಲಿ ಚಾಮುಂಡಿಬೆಟ್ಟ ಹಾಗೂ ಉತ್ತನಹಳ್ಳಿ ಜ್ವಾಲಾಮುಖಿ ದೇವಾಲಯದ ಒಡೆತನದ ವಿವರವಿದೆ. ಉಳಿದಂತೆ ಮೈಸೂರಿನಲ್ಲಿ ಇರುವ ಹಲವಾರು ಆಸ್ತಿಗಳು, ಶ್ರೀರಂಗಪಟ್ಟಣದಲ್ಲಿ ಕೆಲವು ಆಸ್ತಿಗಳ ವಿವರವಿದೆ.
ರಾಜಮನೆತನದವರ ಪ್ರಕಾರ, ಸ್ವಾತಂತ್ರೃ ಬಂದ ಬಳಿಕ ಸಂಸ್ಥಾನಗಳು ರಾಜ್ಯಗಳಿಗೆ ವೀಲಿನವಾದ ಸಮಯದಲ್ಲಿ ರಾಜಮನೆತನಕ್ಕೆ ಸೇರಿದ ಖಾಸಗಿ ಆಸ್ತಿಗಳ ಪಟ್ಟಿಯನ್ನು ನೀಡಲಾಗಿತ್ತು. ಈ ಪಟ್ಟಿಯನ್ನು 1950 ಜನವರಿ 23ರಂದು ಕೇಂದ್ರ ಸರ್ಕಾರದ ರಾಜ್ಯ ಮಂತ್ರಾಲಯ ಹಾಗೂ ಜಯಚಾಮರಾಜ ಒಡೆಯರ್ ನಡುವೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಧಿಕೃತ ಮುದ್ರೆ ಒತ್ತಲಾಯಿತು.
ಇದಲ್ಲದೆ 1971ರಲ್ಲಿ ನಡೆದ ಸಂವಿಧಾನದ 26ನೇ ತಿದ್ದುಪಡಿಯಲ್ಲಿ ಖಾಸಗಿ ಆಸ್ತಿಗಳ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರ ಪ್ರಕಾರ ಸಂಸ್ಥಾನಗಳು ವೀಲಿನವಾದ ಸಮಯದಲ್ಲಿ ನೀಡಿದ ಆಸ್ತಿಗಳ ವಿವರಗಳು ಅವರಿಗೆ ಸಂಪೂರ್ಣವಾಗಿ ಸೇರುವುದು ಎಂದು ತಿಳಿಸಲಾಗಿತ್ತು.
1972ರಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿತ್ತು. ಇದರ ಅನ್ವಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿವರಗಳನ್ನು ಪರಿಶೀಲಿಸಿ ಅಧಿಕೃತ ಮೊಹರನ್ನು ಹಾಕಿದ್ದಾರೆ. ಇದರಲ್ಲಿ ಚಾಮುಂಡಿಬೆಟ್ಟವೂ ಸೇರಿದೆ ಎನ್ನುತ್ತಾರೆ.

ರಾಜ್ಯ ಸರ್ಕಾರವು 1974ರಲ್ಲಿ ರಾಜಮನೆತನದವರು ಚಾಮುಂಡೇಶ್ವರಿ ದೇವಸ್ಥಾನವನ್ನು ನಿರ್ವಹಣೆ ಮಾಡಲು ಆಗುವುದಿಲ್ಲ ಎನ್ನುವ ಮನವಿಯನ್ನು ಆಧರಿಸಿ ಸರ್ಕಾರ ನಿರ್ವಹಣೆ ಮಾಡಲು ಪ್ರಾರಂಭಿಸಿತು. ಬಳಿಕ ಅದನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿತು. ಆಗ ಸಂಘರ್ಷ ಶುರುವಾಯಿತು. ಅಂದು ಸಂಸದರೂ ಆಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನ್ಯಾಯಾಲಯದ ಮೊರೆ ಹೋಗಿದ್ದರು.

ಹಿಂದಿನಿಂದಲೂ ಇದೆ ಸಂಘರ್ಷ
ಸರ್ಕಾರ ಹಾಗೂ ಮೈಸೂರು ರಾಜಮನೆತನದ ನಡುವೆ ಆಸ್ತಿ ವಿಚಾರದಲ್ಲಿ ಹಿಂದಿನಿಂದಲೂ ಸಂಘರ್ಷ ನಡೆಯುತ್ತಲೇ ಬರುತ್ತಿದೆ. ಮೈಸೂರು ಅರಮನೆ, ಬೆಂಗಳೂರು ಅರಮನೆ ಮಾಲೀಕತ್ವದ ವಿಚಾರ, ಕುರುಬಾರಹಳ್ಳಿ ಸರ್ವೇ ನಂ 4ರ ಆಸ್ತಿಯ ವಿಚಾರದಲ್ಲಿ ಹೋರಾಟಗಳೇ ಆಗಿದೆ.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೇ ಇಂತಹ ಸಂಘರ್ಷಗಳು ಪ್ರಚಾರ ಪಡೆದುಕೊಳ್ಳುತ್ತಿವೆ. ಆಸ್ತಿ ವಿಚಾರವಾಗಿಯೇ ಹಿಂದೊಮ್ಮೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ದಸರಾ ಸಮಯದಲ್ಲಿ ತಿಕ್ಕಾಟ ತಾರಕಕ್ಕೆ ಏರಿತ್ತು.

ದಸರಾ ನಡೆಸಲು ಅಂಬಾರಿ ಹಾಗೂ ಕಟ್ಟಲು ಹಗ್ಗ ನೀಡುವುದಿಲ್ಲ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಪ್ರಮೋದಾ ದೇವಿ ಹೇಳಿಕೆ ನೀಡಿದ್ದರು. ಆ ವೇಳೆ ಬೀಗ ಒಡೆದು ಅಂಬಾರಿ ತರುವುದಾಗಿ ಸಿದ್ದರಾಮಯ್ಯ ಗುಡುಗಿದ್ದರು. ಇದು ದೊಡ್ಡ ಸುದ್ದಿಯಾಗಿ ಅಂತಿಮವಾಗಿ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ ಎಂದು ದಸರಾಗೆ ರಾಜವಂಶಸ್ಥರು ಸಹಕಾರ ನೀಡಿದರು.

ಅಭಿವೃದ್ಧಿ ಉದ್ದೇಶದಿಂದ ಅಗಿದೆ
ಸ್ವಾತಂತ್ರಾೃನಂತರ ರಾಜರ ಆಸ್ತಿ ಸರ್ಕಾರಕ್ಕೆ ಸೇರಬೇಕು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇವಸ್ಥಾನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ಅಭಿವೃದ್ಧಿ ಉದ್ದೇಶದಿಂದ ಪ್ರಾಧಿಕಾರ ರಚನೆ ಅಗಿದೆ. ವಿವಾದ ನ್ಯಾಯಾಲಯದಲ್ಲಿ ಇದ್ದು, ಸರ್ಕಾರ ಗಮನಿಸುತ್ತದೆ.

ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net