

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಕ್ಪ್ ಬೋರ್ಡ್ ಆಸ್ತಿ ಕಬಳಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಮದಿಗೆ ಮಾತನಾಡಿದ ಅವರು, ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಬಿಜೆಪಿ ಹಿರಿಯ ನಾಯಕ ಬಸವನಗೌಡ ಪಾಟೀಲ ಯತ್ನಾಳ ಅವರ ಹೋರಾಟದ ಫಲವಾಗಿ ಕೇಂದ್ರದ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಆಗಮಿಸುತ್ತಿದ್ದು, ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಯತ್ನಾಳ ಅವರ ಹೋರಾಟದಿಂದ ನ್ಯಾಯ ಸಿಗಲಿದೆ ಎಂದು ಹೇಳಿದರು.
ವಕ್ಪ್ ತಿದ್ದುಪಡಿ ಮಸೂದೆ ಜಾರಿಗೆ ತರುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿದೆ. ಸಮಿತಿ ಈ ಕಾರ್ಯ ಮಾಡಲಿದೆ. ವಕ್ಪ್ ಮುಖಾಂತರ ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಅದನ್ನು ಸರಿಪಡಿಸುವ ಒಂದು ಅವಕಾಶವಿದೆ. ಮುಂದಿನ ದಿನಗಳಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ಬಂದಾಗ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರೆಕಿಸಿಕೊಡಲು ಅವಕಾಶವಿದೆ ಎಂದು ಹೇಳಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಸಿಎಂ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಳೆದ 45 ತಿಂಗಳಿನಿಂದ ರಾಜ್ಯದಲ್ಲಿ ಈ ವಿಷಯ ಚರ್ಚೆ ನಡೆಯುತ್ತಿದೆ. ಕಾನೂನಿನ ಎದುರು ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.