ಬಿಬಿಎಂಪಿಯಿಂದ ಪಿಒಪಿ ಗಣೇಶ ಮೂರ್ತಿಗಳ ಜಪ್ತಿ

pop ganesh
Published on

ಬೆಂಗಳೂರು: ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪಿಒಪಿ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ನಿರ್ಮಿಸಿರುವ ಮೂರ್ತಿಗಳಿಗೆ ಪಾಲಿಕೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿರುವ ತಯಾರಕರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಮಾಣದ ಮೂರ್ತಿಗಳನ್ನು ಜಪ್ತಿ ಮಾಡಿ ಮಳಿಗೆಗಳಿಗೆ ಬೀಗ ಹಾಕಿದೆ.

ರಾಜರಾಜೇಶ್ವರಿನಗರ ವಲಯದ ಹೆಮ್ಮಿಗೆಪುರ ವಾರ್ಡ್‌ನ ಕೋಡಿಪಾಳ್ಯ ಹಾಗೂ ಚೆಟ್ಟುಪಾಳ್ಯದಲ್ಲಿ ಖಾಸಗಿ ಗೋದಾಮಿನಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಸಂಘಟನೆಯೊಂದು ಪಾಲಿಕೆಗೆ ದೂರು ನೀಡಿತ್ತು. ದೂರು ಆಧರಿಸಿ ಶುಕ್ರವಾರ ಆರ್.ಆರ್.ನಗರ ವಲಯದ ಆರೋಗ್ಯ ವೈದ್ಯಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿಯಾಗಿ ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ರಾಸಾಯನಿಕ ಬಳಿಕ ಮೂರ್ತಿಗಳನ್ನು ತಯಾರಿಸುತ್ತಿದ್ದನ್ನು ದೃಢಪಡಿಸಿಕೊಂಡು ನಿಯಮಾನುಸಾರ ಗೋದಾಮಿಗೆ ಬೀಗ ಹಾಕಿ ತಯಾರಕರ ವಿರುದ್ಧ ಶಿಸ್ತುಕ್ರಮವಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಹೊರತಾಗಿಯೂ ನಗರದ ಕೆಲ ಪ್ರದೇಶಗಳಲ್ಲಿ ಪಿಒಪಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇದರ ವಿರುದ್ಧವೂ ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಕಚೇರಿಯಿಂದ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಾಲಿಕೆ ಮುಖ್ಯಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net