ಕಂಪ್ಯೂಟರ್, ಪೀಠೋಪಕರಣ ಜಪ್ತಿ

29M.D.R.7
ಕರ್ತವ್ಯದ ವೇಳೆ ಮೃತಪಟ್ಟಿದ್ದ ಗ್ರಾಮ ಪಂಚಾಯಿತಿ ನೌಕರನ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಪಂ ಕಚೇರಿಯ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.
Published on

ಮದ್ದೂರು: ಕರ್ತವ್ಯದ ವೇಳೆ ಮೃತಪಟ್ಟಿದ್ದ ಗ್ರಾಮ ಪಂಚಾಯಿತಿ ನೌಕರನ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಪಂ ಕಚೇರಿಯ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಗುರುವಾರ ಜಪ್ತಿ ಮಾಡಲಾಯಿತು.

ಜ.20ರಂದು ನ್ಯಾಯಾಲಯವು ಮರಳಿಗ ಗ್ರಾಮ ಪಂಚಾಯಿತಿ ಕಚೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಮೇರೆಗೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಕಚೇರಿಯ ಕಂಪ್ಯೂಟರ್, ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಕಚೇರಿಗೆ ಎಂದಿನಂತೆ ಬಂದಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಜಪ್ತಿ ವಿಷಯ ಕೇಳಿದ ತಕ್ಷಣ ಕಂಗಾಲಾಗಿ, ಕಚೇರಿಯಿಂದ ಹೊರ ನಡೆದರು.

2009ರಲ್ಲಿ ಮರಳಿಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಎಂಬುವವರು ಬೀದಿ ದೀಪಗಳ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು. ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಪರಿಹಾರ ನೀಡುವಂತೆ ಆತನ ಪತ್ನಿ ಸುಜಾತಾ ಮನವಿ ಸಲ್ಲಿಸಿದ್ದರು.

ಸುಜಾತಾ ಅವರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಬೇಜವಾಬ್ದಾರಿತನ ತೋರಿದ್ದರು. ಈ ಸಂಬಂಧ ಮೃತ ರವಿ ಅವರ ಕುಟುಂಬದವರು 2009ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸತತ ವಿಚಾರಣೆ ನಡೆದು 2009ರಿಂದ 2023ರವರೆಗೆ ಶೇ.15ರ ಹೆಚ್ಚುವರಿ ಬಡ್ಡಿ ಸೇರಿ 11,46,623 ಲಕ್ಷ ರೂ. ಪರಿಹಾರ ಹಣ ತುಂಬಿಕೊಡುವಂತೆ ಹೈಕೋರ್ಟ್ ಆದೇಶಿಸಿದೆ.
ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರದ ಪೂರ್ಣ ಹಣವನ್ನು ಮೃತ ರವಿ ಅವರ ಕುಟುಂಬಕ್ಕೆ ನೀಡದ ಕಾರಣ ಹಾಗೂ ನ್ಯಾಯಾಲಯದ ಆದೇಶವನ್ನು ಗ್ರಾಪಂ ಪರಿಪಾಲನೆ ಮಾಡದ ಹಿನ್ನೆಲೆಯಲ್ಲಿ ಜಪ್ತಿ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ಹಿರಿಯ ವಕೀಲ ಬಿ. ರಾಮಕೃಷ್ಣೇಗೌಡ, ಸಹಾಯಕ ವಕೀಲ ಸುನೀಲ್ ಕುಮಾರದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net