

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಡಿ ಭ್ರಷ್ಟಾಚಾರ ಎಸಗಿ ಸೇವೆಯಿಂದ ಅಮಾನತ್ತುಗೊಂಡಿರುವ ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಉದ್ಯೋಗ ಖಾತ್ರಿ ಯೋಜನೆಯ 2020-21 ರಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳಲ್ಲಿ 150 ಕೋಟಿ ರೂ. ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ಭ್ರಷ್ಟಾಚಾರ ಎಸಗಿದ ಪಿಡಿಒಗಳನ್ನು ಕೇವಲ ಸೇವೆಯಿಂದ ಅಮಾನತ್ತುಗೊಳಿಸಿದರೆ ಸಾಲದು, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹಣ ವಸೂಲಿಗೆ ಕ್ರಮಕೈಗೊಳ್ಳಬೇಕು. ಜತೆಗೆ ಹಗರಣದಲ್ಲಿ ಭಾಗಿಯಾದ ಇನ್ನಿತರ ಅಕಾರಿಗಳು, ರಾಜಕಾರಣಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ಪ್ರಕರಣದಲ್ಲಿ ಇಂಜಿನಿಯರ್‌ಗಳು, ಡಾಟಾ ಎಂಟ್ರಿ ಆಪರೇಟರ್‌ಗಳು, ಗ್ರಾ.ಪಂ. ಅಧ್ಯಕ್ಷರು ಕೂಡಾ ಭಾಗಿಯಾಗಿದ್ದಾರೆ. ಕಾಮಗಾರಿಗೆ ಅನುಮತಿ ನೀಡಿದ ಹಿರಿಯ ಅಕಾರಿಗಳು ಇದರಲ್ಲಿ ಪಾಲು ತಿಂದಿದ್ದಾರೆ. ಕೂಡಲೇ ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಅಮರೇಶ, ಕೆಆರ್‌ಎಸ್ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಸಿಪಿಐಎಂಎಲ್ ರೆಡ್‌ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಸೈಯದ್ ಅಬ್ಬಾಸ್ ಅಲಿ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಆರ್.ಹುಚ್ಚರೆಡ್ಡಿ, ಮಲ್ಲೇಶ, ನಿಜವಂತ ಪಾಲ್ಗೊಂಡಿದ್ದರು.