

ಮೈಸೂರು: ನನ್ನ 20 ವರ್ಷಗಳ ರಾಜಕೀಯ ವನವಾಸಕ್ಕೆ ಈ ಬಾರಿ ಮುಕ್ತಿ ಸಿಗುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜ್ ಹೇಳಿದರು.
ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಮಠದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಬಿಜೆಪಿಯಲ್ಲಿ ಸಂಘಟನೆಯಲ್ಲಿ ತೊಡಗಿದ್ದರಿಂದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಹೀಗಾಗಿ 20 ವರ್ಷಗಳ ರಾಜಕೀಯ ವನವಾಸಕ್ಕೆ ಮುಕ್ತಿ ಸಿಗುವ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದರು.
2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಮೂರೂವರೆ ವರ್ಷ ಮಾತ್ರ ಕೆಲಸ ಮಾಡಲು ಅವಕಾಶವಾಯಿತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಮೇಲೆ ಆರ್.ಧ್ರುವನಾರಾಯಣ ಅವರು ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದ ಬಳಿಕ ಅವಕಾಶ ಕೈತಪ್ಪಿತು ಎಂದರು.
ನಾನು ಮತ್ತು ಧ್ರುವನಾರಾಯಣ ಅವರು 31 ವರ್ಷಗಳ ಹಿಂದೆ ಯುವ ಕಾಂಗ್ರೆಸ್ ಮೂಲಕ ರಾಜಕಾರಣ ಪ್ರಾರಂಭಿಸಿದೆವು. ಹಾಗಾಗಿ ಮುಂದೆ ಏನಾದರೂ ಮಾಡೋಣ ಎಂದು ಧ್ರುವನಾರಾಯಣ ಅವರು ಮಾತುಕೊಟ್ಟ ಮೇಲೆ ನನ್ನ ಪರವಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಕೆಲವರಿಂದ ಅವಕಾಶ ಸಿಗುವಾಗ ಅದಕ್ಕೆ ಕಲ್ಲು ಬಿತ್ತು. ಯಾಕೆ ಕಲ್ಲು ಬಿತ್ತು, ಏನಾಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ ಎಂದರು.
ನಾನಾ ಕಾರಣಕ್ಕಾಗಿ ನಾನು ಪಕ್ಷ ಬದಲಿಸಿದರೂ ಸಾರ್ವಜನಿಕರ ಸೇವೆ ಮಾಡಿಕೊಂಡು ಬಂದಿದ್ದೇನೆ. ಈಗ ಬಿಜೆಪಿ ನಾಯಕರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನಲ್ಲಿರುವ ಕೆಲವರು ನಮ್ಮನ್ನು ಬೆಂಬಲಿಸುತ್ತಾರೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿಗೆ ಮತ ಹಾಕುವ ಜತೆಗೆ ಎಲ್ಲರಿಗೂ ಹೇಳುವ ಭರವಸೆ ನೀಡಿದ್ದಾರೆ. ಅವರ ಅಳಿಯ ಡಾ.ಮೋಹನ್ ಅವರಿಗೆ ಟಿಕೆಟ್ ದೊರೆಯದೆ ಇರುವುದರಿಂದ ಯಾವ ಅಸಮಾಧಾನ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.