ಪರಿಷತ್ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ

Ayanur manjunath
ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ
Published on

ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರವು ಪ್ರಸಕ್ತ ಬಾರಿ ಅತ್ಯಂತ ಒತ್ತಡದ ಚುನಾವಣೆಗೆ ಸಾಕ್ಷಿಯಾಗಲಿದ್ದು, ಮೇ 16ರಂದು ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ 12 ದಿನ ಮಾತ್ರ ಪ್ರಚಾರಕ್ಕೆ ಸಿಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ(ಹೊನ್ನಾಳಿ, ನ್ಯಾಮತಿ, ಚನ್ನಗಿರಿ) ಜಿಲ್ಲೆಗಳ ನೈಋತ್ಯ ಪದವೀಧರ ಕ್ಷೇತ್ರದಲ್ಲಿ 86 ಸಾವಿರ ಮತದಾರರಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ಷೇತ್ರ ವ್ಯಾಪ್ತಿಯ 14 ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲಾಗಿದೆ. ಪಕ್ಷದಿಂದ ಪದವೀಧರ ಮತದಾರರನ್ನು ಮುಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ನೌಕರರು, ಪದವೀಧರರು, ಕಾರ್ಮಿಕರ ಕಷ್ಟ ಅರಿತಿರುವ ನನಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
40 ವರ್ಷಗಳಿಂದ ಕಾರ್ಮಿಕರ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. 7ನೇ ವೇತನ ಆಯೋಗ ಜಾರಿ, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸುವ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ. ಅನುಕಂಪ, ಜಾತಿ ಮತ್ತು ಹಣದಿಂದ ಮತ ಕೇಳುವುದಿಲ್ಲ. ಕಾರ್ಮಿಕರಿಗಾಗಿ ಮಾಡಿರುವ ಹೋರಾಟದ ಆಧಾರದ ಮೇಲೆ ಮತ ಕೇಳುತ್ತೇನೆ ಎಂದರು.
ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ವೈ.ಎಚ್.ನಾಗರಾಜ್, ಕೃಷ್ಣ, ಲಕ್ಷ್ಮಣ, ಹಿರಣ್ಣಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ದಿನೇಶ್ ನಾಮಪತ್ರ ಹಿಂಪಡೆಯುವ ಸಾಧ್ಯತೆ
ಟಿಕೆಟ್ ಸಿಗದ ಕಾರಣ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ ಎಂದು ಆಯನೂರು ಮಂಜುನಾಥ ಹೇಳಿದರು. ದಿನೇಶ್ ಅವರನ್ನು ನಾನು ಮತ್ತು ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮನವೊಲಿಸುವ ಪ್ರಯತ್ನ ಮಾಡಿದ್ದೆವು. ಆದರೆ ಅವರು ಒಪ್ಪದೆ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಮೇ 20ರವರೆಗೆ ಕಾಲಾವಕಾಶವಿದ್ದು, ಅಷ್ಟರೊಳಗೆ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ ಎಂದರು. ದಿನೇಶ್ ಪಕ್ಷನಿಷ್ಠರು. ನನ್ನಂತೆ ಪಕ್ಷ ಬಿಟ್ಟು ಬಂದವರಲ್ಲ. ಟಿಕೆಟ್ ತಪ್ಪಿದಾಗ ಬೇಸರ, ನಿರಾಸೆ ಆಗುವುದು ಸಹಜ. ಒಂದು ವೇಳೆ ನಾಮಪತ್ರ ಹಿಂಪಡೆಯದಿದ್ದರೆ ಸೌಹಾರ್ದ ಸ್ಪರ್ಧೆ ಇರಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net